ಹೊಸ ಹೈಕೋರ್ಟ್ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿಯನ್ನು ನೀಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಶರಣ್ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತು.
ಸ್ವತಃ ವಾದ ಮಂಡಿಸಿದ ಅರ್ಜಿದಾರರು, ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೈಕೋರ್ಟ್‌ನ ನೂತನ ಸಂಕೀರ್ಣ ನಿರ್ಮಾಣ ಮಾಡಲು ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕಬ್ಬನ್ ಪಾರ್ಕ್‌ನಲ್ಲಿ2025ರ ಅಕ್ಟೋಬರ್ 26ರಂದು ನಡೆದ ‘ವಾಕ್ ವಿತ್ ಬೆಂಗಳೂರು‘ ನಾಗರಿಕ ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಶಿವಕುಮಾರ್, ಪ್ರಸ್ತುತ ನ್ಯಾಯಾಂಗವು ಹೈಕೋರ್ಟ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಎದುರಿಸುತ್ತಿದೆ. ಹಾಗಾಗಿ ಕರ್ನಾಟಕ ಹೈಕೋರ್ಟ್ ಅನ್ನು ಹೊಸ ಮತ್ತು ವಿಸ್ತಾರವಾದ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದರೆಂದು ವರದಿಯಾಗಿದೆ.
2014ರಲ್ಲಿ ಹೈಕೋರ್ಟ್, ಕಬ್ಬನ್ ಪಾರ್ಕ್ ಪ್ರದೇಶದೊಳಗೆ (ಹಿಂದಿನ ಚುನಾವಣಾ ಆಯೋಗದ ಕಚೇರಿ ಜಾಗ) ಅನೆಕ್ಸ್ ಕಟ್ಟಡವನ್ನು ನಿರ್ಮಿಸಲು ರಿಜಿಸ್ಟ್ರಾರ್ ಜನರಲ್‌ಗೆ ಅನುಮತಿ ನೀಡಿತ್ತು. ಅದರಂತೆ ಇದೀಗ ಅನೆಕ್ಸ್ ಕಟ್ಟಡವನ್ನು ನಿರ್ಮಿಸಲು ಅನುಮತಿ ಕೋರಿ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಸಹ ನ್ಯಾಯಾಲಯವು ಮಾನ್ಯ ಮಾಡಿತು.
ಅರ್ಜಿಯಲ್ಲಿ ಹೈಕೋರ್ಟ್‌ನ ಉದ್ದೇಶಿತ ಹೊಸ ಕಟ್ಟಡ ಆವರಣವನ್ನು ಪೂರ್ಣಗೊಳಿಸಲು ಅನುದಾನವನ್ನು ಮಂಜೂರು ಮಾಡಲು ಸಂಬಂಧಪಟ್ಟ ಇಲಾಖೆಗಳಿಂದ ನಿರ್ದೇಶನ ನೀಡುವಂತೆ ಕೋರಲಾಗಿದೆ.