[ಅತೀಕ್ ಅಹಮದ್‌ ಹತ್ಯೆ] ತನಿಖೆಯಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಲಾಗಿದೆ: ಸುಪ್ರೀಂಗೆ ಉ. ಪ್ರದೇಶ ಸರ್ಕಾರದ ಮಾಹಿತಿ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸ್ಥಿತಿ ಗತಿ ವರದಿ ಸಲ್ಲಿಸಲಾಗಿದೆ.
Atiq Ahmed and Supreme Court
Atiq Ahmed and Supreme Court

ಪಾತಕಿ ಮತ್ತು ಮಾಜಿ ಸಂಸದ ಅತೀಕ್‌ ಅಹಮದ್‌ ಹತ್ಯೆ ತನಿಖೆಯಲ್ಲಿ ಯಾವುದೇ ಅಂಶವನ್ನು ಕಡೆಗಣಿಸಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ವಿಶಾಲ್ ತಿವಾರಿ ಮತ್ತು ಉ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜೂನ್‌ 30ರಂದು ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ ಈ ವಿಚಾರ ತಿಳಿಸಲಾಗಿದೆ.

ಕೆಲ ತಿಂಗಳುಗಳ ಹಿಂದೆ ಪೊಲೀಸ್‌ ವಶದಲ್ಲಿದ್ದ ಅತೀಕ್‌ ಅಹಮದ್‌ ಹಾಗೂ ಆತನ ಸಹೋದರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಪಾಯಿಂಟ್‌ ಬ್ಲಾಂಕ್‌ ಅಂತರದಲ್ಲಿ ಅವರಿಬ್ಬರನ್ನೂ ಗುಂಡಿಟ್ಟು ಕೊಂದಿದ್ದರು.

ಅತೀಕ್‌ ಮತ್ತು ಆತನ ಸಹೋದರನ ಹತ್ಯೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಕೋರಿ ಆತನ ಪತ್ನಿ ಸುಪ್ರೀಂಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಪೊಲೀಸರು ವಿವಿಧ ಆರೋಪಿಗಳನ್ನು ನಿರ್ಭಯವಾಗಿ ಕೊಲ್ಲುತ್ತಿದ್ದಾರೆ. ಅತೀಕ್‌ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

ಇದಲ್ಲದೆ ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ ಅರ್ಜಿಯೂ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದ್ದು, ಇದೇ ಮನವಿಗೆ ಸಂಬಂಧಿಸಿದಂತೆ ಸರ್ಕಾರ ಪ್ರಸ್ತುತ ಅಫಿಡವಿಟ್ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ತನಿಖೆ ನಡೆಸಬೇಕು ಎಂದು ತಿವಾರಿ ಕೋರಿದ್ದರು. 2017ರಿಂದ ಉತ್ತರ ಪ್ರದೇಶದಲ್ಲಿ ನಡೆದಿರುವ 183 ಎನ್‌ಕೌಂಟರ್‌ ಪ್ರಕರಣಗಳನ್ನೂ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು. ಅಲ್ಲದೆ (ಎಂಟು ಮಂದಿ ಪೊಲೀಸರ ಸಾವಿಗೆ ಕಾರಣನಾಗಿದ್ದ) ಪಾತಕಿ ವಿಕಾಸ್‌ ದುಬೆ ನಕಲಿ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾದಾಗ ಅದನ್ನು ಪರಿಹರಿಸಲು ಮುಂದಾಗಬೇಕು ಎಂದು ಅವರು ವಾದಿಸಿದ್ದರು.

ಅಫಿಡವಿಟ್‌ನ ಪ್ರಮುಖ ಅಂಶಗಳು

  • ಅತೀಕ್‌ ಮತ್ತವನ ಸಹೋದರನ ಹತ್ಯೆಗೆ ಕಾರಣವಾದ ಭದ್ರತಾ ಲೋಪಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.

  • ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಅಧಿಕಾರಿಯೊಬ್ಬರ ವಿರುದ್ಧ ಕ್ರಿಮಿನಲ್‌ ನಂಬಿಕೆ ದ್ರೋಹಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ.

  • ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳದಂತೆ ಕೈಕೋಳ ತೊಡಿಸುವುದು ಸೇರಿದಂತೆ ಅಫಿಡವಿಟ್‌ನಲ್ಲಿ ಉತ್ತರ ಪ್ರದೇಶದಾದ್ಯಂತ ಪೊಲೀಸ್ ವ್ಯವಸ್ಥೆ ಸುಧಾರಣೆ ಮತ್ತು ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

  • ಸಂಘಟಿತ ಅಪರಾಧ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ನಿಯೋಜಿಸಿದೆ.

  • ಎಲ್ಲಾ ಜಿಲ್ಲೆಗಳಲ್ಲಿ ಭೂ ಮಾಫಿಯಾ ವಿರೋಧಿ ಕಾರ್ಯಪಡೆಯನ್ನು ರಚಿಸಲಾಗಿದ್ದು ಪೋರ್ಟಲ್ ಮೂಲಕ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

  • ರಾಜ್ಯದ 66 ಮಾಫಿಯಾ ದೊರೆಗಳನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿ ಹಂತದಲ್ಲಿ ಗುರುತಿಸುವ ಮೂಲಕ ಅವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿದೆ.

  •  ಸಮಸ್ಯೆ ಪರಿಹರಿಸಲು ಉತ್ತರ ಪ್ರದೇಶ ರೌಡಿ ಮತ್ತು ಸಮಾಜಘಾತುಕ ಚಟುವಟಿಕೆಗಳ (ತಡೆ) ಕಾಯಿದೆ 1986ಕ್ಕೆತಿದ್ದುಪಡಿಗಳನ್ನು ಕೂಡ ಮಾಡಲಾಗುತ್ತಿದೆ.

  • ಸಂಘಟಿತ ಅಪರಾಧಿಗಳನ್ನು ಎದುರಿಸಲು, ʼಉತ್ತರ ಪ್ರದೇಶ ಸಂಘಟಿತ ಅಪರಾಧ ನಿಯಂತ್ರಣ ಮಸೂದೆ 2017" ಜಾರಿಗೊಳಿಸುವ ಪ್ರಸ್ತಾವನೆಯನ್ನು ಜುಲೈ 2017ರಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com