ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರಗಳು ವಿಫಲ: ಸುಪ್ರೀಂ ಕೋರ್ಟ್ ಮತ್ತೆ ಅಸಮಾಧಾನ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ನಿರಾಕರಿಸುವ ಸರ್ಕಾರಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಪೀಠ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಲಾಗುವುದು ಎಂದಿತು.
Supreme Court of India
Supreme Court of India
Published on

ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸುವಂತೆ ಮಾರ್ಚ್ 19ರಂದು ತಾನು ನೀಡಿದ್ದ ಆದೇಶ ಪಾಲಿಸಲು ವಿಫಲವಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ [ವಲಸೆಕಾರ್ಮಿಕರ ಸಮಸ್ಯೆಗಳ ಕುರಿತಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಳ್ಳಲಾಗಿದ್ದ ಪ್ರಕರಣ].

ಆಗಸ್ಟ್ 27 ರಂದು ನಡೆಯುವ ಪ್ರಕರಣದ ಮುಂದಿನ ವಿಚಾರಣೆ ಹೊತ್ತಿಗೆ ಆದೇಶ ಪಾಲನೆಯಾಗದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ವಿಭಾಗೀಯ ಪೀಠ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಲಾಗುವುದು ಎಂದಿತು.

"ಇದು ಸರ್ಕಾರಗಳ ಸಂಪೂರ್ಣ ಹೇಯ ಕೃತ್ಯ. ಮುಂದಿನ ದಿನಾಂಕದೊಳಗೆ ಆದೇಶ ಪಾಲಿಸದಿದ್ದರೆ ನಾವು ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್‌ ನೀಡುತ್ತೇವೆ. ನಮ್ಮ ಆದೇಶ ಪಾಲನೆಯಾಗುತ್ತಿದೆಯೇ ಎಂದು ನೋಡಿಕೊಳ್ಳುವುದು ನಮಗೆ ತಿಳಿದಿಲ್ಲ ಎಂದು ಎಂದಿಗೂ ಯೋಚಿಸಬೇಡಿ. ಇದನ್ನು ನೆನಪಿನಲ್ಲಿಡಿ" ಎಂದು ನ್ಯಾಯಾಲಯ ಕಿಡಿಕಾರಿತು.

ಪಡಿತರ ಚೀಟಿ ವಿತರಿಸುವ ಕುರಿತಂತೆ ತ್ರಿಪುರ ಮತ್ತು ಬಿಹಾರ ರಾಜ್ಯಗಳಲ್ಲಿ ಮಾತ್ರ ಶೇ 100ರಷ್ಟು ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಲ್ಲಿ ಕೆಲವು ಪರಿಶೀಲನೆ ಪೂರ್ಣಗೊಳಿಸುವ ಪ್ರಕ್ರಿಯೆಲ್ಲಿವೆ. ಇನ್ನೂ ಕೆಲವು ಪರಿಶೀಲನೆ ಕಾರ್ಯ ಆರಂಭಿಸಿಯೇ ಇಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದರು.

Also Read
ಎಂಟು ಕೋಟಿ ವಲಸೆ ಕಾರ್ಮಿಕರಿಗೆ 2 ತಿಂಗಳೊಳಗೆ ಪಡಿತರ ಚೀಟಿ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಿದ್ದರೂ, ಕೇಂದ್ರ ಸರ್ಕಾರ ಹೆಚ್ಚುವರಿ ಪಡಿತರವನ್ನು ನೀಡಿಲ್ಲ ಎಂಬ ಕಾರಣಕ್ಕಾಗಿ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅಮಾನುಲ್ಲಾ ಅವರು ಮೌಖಿಕವಾಗಿ  "ಸುಪ್ರೀಂಕೋರ್ಟ್‌ನ ಆದೇಶವನ್ನು ನಿರ್ಣಯಿಸಲು ಈ ರಾಜ್ಯಗಳು ಯಾರು? ಯಾರು ಪಾಲಿಸಿಲ್ಲ ಎಂದು ನಮಗೆ ತಿಳಿಸಿ. ನಾವು ದಂಡ ವಿಧಿಸುತ್ತೇವೆ ಮತ್ತು ಪಾಲಿಸದಿದ್ದಕ್ಕಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್‌ ನೀಡುತ್ತೇವೆ. 4 ತಿಂಗಳುಗಳು ಕಳೆದರೂ ಏನೂ ಮಾಡಿಲ್ಲ," ಎಂದು ನ್ಯಾಯಾಲಯ ಟೀಕಿಸಿತು.

2020 ರ ಕೋವಿಡ್ ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ತಾನು ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. 

ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸುವ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕಳೆದ ಮಾರ್ಚ್ 19ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಒದಗಿಸುವಂತೆ ತಾನು ಒಂದು ವರ್ಷದ ಹಿಂದೆ ನೀಡಿದ್ದ ಆದೇಶವನ್ನು ಇನ್ನೂ ಜಾರಿಗೆ ತರಲಾಗಿಲ್ಲ ಎಂಬ ಬಗ್ಗೆ ನ್ಯಾಯಾಲಯ ಆಗ ಬೇಸರ ವ್ಯಕ್ತಪಡಿಸಿತ್ತು.

 ಕಾರ್ಡ್‌ ಹೊಂದಿದವರಿಗೆ ಎಲೆಕ್ಟ್ರಾನಿಕ್‌ ʼನಿಮ್ಮ ಗ್ರಾಹಕರ ಅರಿಯಿರಿʼ (ಇ- ಕೆವೈಸಿ) ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಏಕಕಾಲದಲ್ಲಿ ಮುಂದುವರೆಸಬಹುದು ಎಂದು ಕೂಡ ನ್ಯಾಯಾಲಯ ಆ ಸಂದರ್ಭದಲ್ಲಿ ಹೇಳಿತ್ತು.

ಇಂದು ಪ್ರಕರಣದ ವಿಚಾರಣೆ ನಡೆದಾಗ, ಆದೇಶವನ್ನು ಇನ್ನಷ್ಟೇ ಜಾರಿಗೊಳಿಸಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

Also Read
ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ದೊರೆಯುವಂತೆ ನೋಡಿಕೊಳ್ಳಿ: ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನಿರ್ದೇಶನ

ಆಗ ನ್ಯಾಯಾಲಯ "ದೌರ್ಜನ್ಯ. ಇಲ್ಲಿನ ಸರ್ಕಾರಗಳ ಪದಾಧಿಕಾರಿಗಳ  ಗೌರವಾರ್ಹತೆ ಬಗ್ಗೆ ನಾವು ಪ್ರತಿಕ್ರಿಯಿಸುವಂತೆ ನೀವು ಬಯಸುತ್ತಿದ್ದೀರಿ. ಅದರಿಂದ ಹಿಂದೆ ಸರಿಯದಂತಿರಲು ನಮಗೇನೂ ಅನ್ನಿಸದು. ನಾವು ಈ ಬಗ್ಗೆ ಪ್ರಬಂಧವನ್ನೇ ಬರೆಯುತ್ತೇವೆ. ನಮ್ಮನ್ನು ಒತ್ತಾಯಿಸಬೇಡಿ. ನಿಮ್ಮ ಸರ್ಕಾರದ  ಬಗ್ಗೆ ಹೇಳಿಕೆ ನೀಡುವಂತೆ ನಮ್ಮನ್ನು ಒತ್ತಾಯಿಸಬೇಡಿ” ಎಂದು ಕೋರ್ಟ್ ಹೇಳಿದೆ.

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸುವ ಕುರಿತಂತೆ ಸಂಪೂರ್ಣ ಪರಿಶೀಲನೆ ಮತ್ತು ಮಂಜೂರಾತಿಗಾಗಿ ತಾನು ನೀಡಿರುವ ನಿರ್ದೇಶನವನ್ನು ಪಾಲಿಸುವುದಕ್ಕಾಗಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೀಠ 4 ವಾರಗಳ ಗಡುವು ವಿಧಿಸಿದೆ. ರಾಜ್ಯಗಳಿಗೆ ಹೆಚ್ಚುವರಿ ಪಡಿತರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೂಡ ಅದು ನಿರ್ದೇಶನ ನೀಡಿದೆ.

Kannada Bar & Bench
kannada.barandbench.com