ಹಲ್ಲೆ, ಜೀವ ಬೆದರಿಕೆ; ದೂರು ಸಲ್ಲಿಸಲು ಒಂದೂವರೆ ತಿಂಗಳು ವಿಳಂಬ: ಎಫ್‌ಐಆರ್‌ ರದ್ದುಪಡಿಸಿದ ಹೈಕೋರ್ಟ್‌

ಬೆಂಗಳೂರಿನ ಕೇಂದ್ರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ದುರ್ಗಾರಾಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
High Court of Karnataka
High Court of Karnataka

ದೂರು ಸಲ್ಲಿಸಲು 45 ದಿನ ವಿಳಂಬ ಮಾಡಿರುವುದನ್ನು ಪರಿಗಣಿಸಿ, ಹಣದ ವ್ಯವಹಾರದಲ್ಲಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ ಕರ್ನಾಟಕ ಹೈಕೋಟ್ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಕೇಂದ್ರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರಕರಣದ ಎರಡನೇ ಆರೋಪಿ ದುರ್ಗಾರಾಮ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಬಾಬುಲಾಲ್ ಎಂಬುವರು ತುಳಸಿರಾಮ್ ಎಂಬಾತ ತಮ್ಮಿಂದ 66 ಲಕ್ಷ ಹಣ ಪಡೆದು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ. ಈ ಕುರಿತು ಮಾತುಕತೆ ನಡೆಸಲು ನಗರದ ಪ್ರಕಾಶ್ ಕೆಫೆಯಲ್ಲಿ ತುಳಸಿರಾಮ್ ಮತ್ತು ಆತನ ಸ್ನೇಹಿತ ದುರ್ಗಾರಾಮ್ ನನ್ನನ್ನು ಭೇಟಿಯಾಗಿದ್ದರು. ಈ ವೇಳೆ ನನ್ನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಬಾಬುಲಾಲ್ ಆರೋಪಿಸಿದ್ದರು.

ಅದನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ ತುಳಸಿರಾಮ್ ಮತ್ತು ದುರ್ಗಾರಾಮ್ ವಿರುದ್ಧ ಜೀವ ಬೆದರಿಕೆ, ಹಲ್ಲೆ ಮತ್ತು ಅವಮಾನ ಮಾಡಿರುವ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿಯನ್ನು ಅಂಗೀಕರಿಸಿದ್ದ ನಗರದ 1ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಪ್ರಕರಣದಲ್ಲಿ ಎರಡನೇ ಆರೋಪಿಯಾದ ದುರ್ಗಾರಾಮ್ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು “ಘಟನೆ ನಡೆದಿದೆ ಎನ್ನಲಾದ ದಿನದಿಂದ 45 ದಿನಗಳ ನಂತರ ದೂರು ದಾಖಲಿಸಲಾಗಿದೆ. ದೂರು ದಾಖಲಿಸಲು ಏಕೆ ವಿಳಂಬ ಎಂಬ ಬಗ್ಗೆ ದೂರುದಾರರು ಸೂಕ್ತ ಕಾರಣ ಹಾಗೂ ವಿವರಣೆ ನೀಡಿಲ್ಲ. ಪೊಲೀಸರು ಪ್ರಕಾಶ್ ಕೆಫೆಯ ನೌಕರರ ಮತ್ತು ಗ್ರಾಹಕರ ಹೇಳಿಕೆ ದಾಖಲಿಸಿಲ್ಲ. ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳ ಇಲ್ಲದ್ದಿರೂ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಹಾಗಾಗಿ, ಅರ್ಜಿದಾರರ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿದ್ದರು.

ಇದನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಘಟನೆ ನಡೆದ ದಿನದಿಂದ ಒಂದೂವರೆ ತಿಂಗಳ ನಂತರ ಹಲ್ಲೆ ನಡೆಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವಮಾನ ಮಾಡಿದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಆದರೆ, ದೂರು ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ಸೂಕ್ತ ಕಾರಣ ಹಾಗೂ ವಿವರಣೆ ನೀಡಿಲ್ಲ. ಇನ್ನೂ ಅರ್ಜಿದಾರರು ಹಲ್ಲೆ ನಡೆಸಿರುವುದರಿಂದ ದೂರುದಾರಿಗೆ ಯಾವುದಾದರು ಗಾಯ ಉಂಟಾಗಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಪೊಲೀಸರು ಸಲ್ಲಿಸಿಲ್ಲ. ಇದರಿಂದ ದುರುದ್ದೇಶದಿಂದ ದೂರು ದಾಖಲಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ದೂರುದಾರರನ್ನು ನಿಂದಿಸಲು ಅರ್ಜಿದಾರರು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಆ ಪದಗಳು ಸಾರ್ವಜನಿಕ ಶಾಂತಿಗೆ ಯಾವುದೇ ರೀತಿ ಭಂಗ ತಂದಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಎಫ್‌ಐಆರ್ ರದ್ದುಪಡಿಸಿದೆ.

Related Stories

No stories found.
Kannada Bar & Bench
kannada.barandbench.com