ವಕೀಲನ ಮೇಲೆ ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ ಹೈಕೋರ್ಟ್‌; 6 ಪೊಲೀಸರ ಅಮಾನತು

ಸಂತ್ರಸ್ತ ವಕೀಲ ಪ್ರೀತಂ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 506, 341, 307, 324, 326 ಮತ್ತು 504 ಜೊತೆಗೆ 149 ಅಡಿ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಡಿಸೆಂಬರ್‌ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ.
ವಕೀಲನ ಮೇಲೆ ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ ಹೈಕೋರ್ಟ್‌; 6 ಪೊಲೀಸರ ಅಮಾನತು

ಚಿಕ್ಕಮಗಳೂರಿನ ವಕೀಲ ಪ್ರೀತಂ ಅವರ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತುರ್ತು ವಿಚಾರಣೆ ನಡೆಸಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಂಡಿರುವುದರಿಂದ ತೃಪ್ತಗೊಂಡಂತೆ ಕಂಡ ಹೈಕೋರ್ಟ್‌, ಕಲಾಪಕ್ಕೆ ಗೈರಾಗದಂತೆ ವಕೀಲರಿಗೆ ಕಿವಿಮಾತು ಹೇಳಿತು.

"ಪ್ರೀತಂ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು" ಎಂದು ಅಡ್ವೊಕೇಟ್‌ ಜನರಲ್‌ ಅವರು ಮೆಮೊದಲ್ಲಿ ತಿಳಿಸಿರುವುದರಿಂದ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ವಕೀಲ ಪ್ರೀತಂ ಮೇಲಿನ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕಾರ್ಯಪ್ರವೃತ್ತವಾಗಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮೊದಲಿಗೆ ಊಟಕ್ಕೂ ಮುಂಚೆ ವಿಚಾರಣೆ ನಡೆಸಿದ ಪೀಠವು ಅಗತ್ಯ ಮಾಹಿತಿಯೊಂದಿಗೆ ಬರುವಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರಿಗೆ ಸೂಚಿಸಿತು. ಭೋಜನಾ ಸಮಯದ ನಂತರ ಪೀಠವು ವಿಸ್ತೃತವಾಗಿ ಪ್ರಕರಣವನ್ನು ಆಲಿಸಿತು.

ಸಂತ್ರಸ್ತ ವಕೀಲ ಪ್ರೀತಂ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 506, 341, 307, 324, 326 ಮತ್ತು 504 ಜೊತೆಗೆ 149 ಅಡಿ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಡಿಸೆಂಬರ್‌ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತು ಮತ್ತು ಕರ್ತವ್ಯಲೋಪದ ಮೇಲೆ ಆರು ಮಂದಿ ಪೊಲೀಸರನ್ನು ಡಿಸೆಂಬರ್‌ 1ರಂದು ಅಮಾನತು ಮಾಡಲಾಗಿದೆ. ಈ ಪೈಕಿ ಒಬ್ಬರು ಪಿಎಸ್‌ಐ, ಒಬ್ಬರು ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಮತ್ತು ನಾಲ್ವರು ಪೇದೆಗಳಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್‌ಪಿ ಎಚ್‌ ಎಂ ಶೈಲೇಂದ್ರ ಅವರಿಗೆ ವಹಿಸಲಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧಿಕಾರಿ ಅವರಿಂದ ವರದಿಯನ್ನೂ ತರಿಸಿಕೊಳ್ಳಲಾಗಿದೆ ಎಂದು ಎಜಿ ಸಲ್ಲಿಸಿರುವ ಮೆಮೊದಲ್ಲಿ ವಿವರಿಸಲಾಗಿದೆ.

ನ್ಯಾಯಾಲಯದಲ್ಲಿ ಹಾಜರಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌ ಹಿತೇಂದ್ರ ಅವರಿಂದ ಸೂಚನೆಯನ್ನು ಪಡೆದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಎಫ್‌ಐಆರ್‌ ದಾಖಲಿಸಿದ ಬಳಿಕ ಪ್ರಕರಣವನ್ನು ನೋಂದಾಯಿಸಲಾಗಿದೆ ಎನ್ನುವ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಡಿವೈಎಸ್‌ಪಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ವಿಶಾಲ್‌ ರಘು ಮತ್ತು ಕೆಎಸ್‌ಬಿಸಿ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಎಸ್‌ ಬಸವರಾಜ ಅವರು ವಕೀಲರ ಮೇಲಿನ ದೌರ್ಜನ್ಯ ನಿಷೇಧ ಮಸೂದೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅಥವಾ ಯಾವುದೇ ನಿರ್ದೇಶನ ನೀಡುವುದು ನಮಗೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಚಿಕ್ಕಮಗಳೂರಿನ ಪ್ರತಿಭಟನಾ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರಿಗೆ ಅಡ್ವೊಕೇಟ್‌ ಜನರಲ್‌ ಅವರು ವೈಯಕ್ತಿಕವಾಗಿ ಪ್ರಕರಣ ಪರಿಶೀಲಿಸುತ್ತಿದ್ದು, ಯಾವುದೇ ತೆರನಾದ ಗಂಭೀರ ಕ್ರಮಗಳನ್ನು ಕೈಗೊಳ್ಳದಂತೆ ವಕೀಲರಿಗೆ ತಿಳಿಸಲಾಗಿದೆ. ನ್ಯಾಯಾಲಯದ ಕೆಲಸದಿಂದ ದೂರ ಉಳಿಯದಂತೆ ವಕೀಲರಿಗೆ ತಿಳಿಸುವಂತೆಯೂ ಸೂಚಿಸಲಾಗಿದೆ. ಇದಕ್ಕೆ ರೆಡ್ಡಿ ಅವರು ಚಿಕ್ಕಮಗಳೂರಿನ ವಕೀಲರ ಸಂಘಕ್ಕೆ ನ್ಯಾಯಾಲಯದ ವಿಚಾರಗಳನ್ನು ತಿಳಿಸಿ, ಕರ್ತವ್ಯಕ್ಕೆ ಮರಳುವಂತೆ ಕೋರಲಾಗುವುದು ಎಂದಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನಲ್ಲಿ ಗುರುವಾರ ಯುವ ವಕೀಲ ಪ್ರೀತಂ ಅವರು ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರೀತಂ ನಡುವೆ ವಾಕ್ಸಮರ ನಡೆದಿದೆ. ದಂಡ ಪಾವತಿಸುವುದಾಗಿ ಪ್ರೀತಂ ಹೇಳಿದರೂ ಕೇಳದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದ್ದರು.

Related Stories

No stories found.
Kannada Bar & Bench
kannada.barandbench.com