ಸಿಜೆಐ ಅವರಿಗೆ ಶೂ ಎಸೆಯಲು ಯತ್ನ: ರಾಕೇಶ್ ಕಿಶೋರ್ ವಕೀಲಿಕೆ ಅಮಾನತುಗೊಳಿಸಿದ ಬಿಸಿಐ

ಮೂಲಗಳ ಪ್ರಕಾರ, ವಕೀಲ ಶೂ ತೆಗೆದು ಸಿಜೆಐ ಗವಾಯಿ ಅವರ ಮೇಲೆ ಎಸೆಯಲು ಮುಂದಾದ.
CJI BR Gavai
CJI BR Gavai
Published on

ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್‌ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದ ವಕೀಲ ರಾಕೇಶ್‌ ಕಿಶೋರ್‌ ಎನ್ನುವಾತ ವಕೀಲಿಕೆಯಲ್ಲಿ ತೊಡಗಲು ಸಾಧ್ಯವಾಗದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಅಮಾನತುಗೊಳಿಸಿದೆ.

 ಬಿಸಿಐ ಹೊರಡಿಸಿರುವ ಮಧ್ಯಂತರ ಆದೇಶದ ಪ್ರಕಾರ ದೆಹಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರುವ ಕಿಶೋರ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ತನ್ನ ಶೂ ತೆಗೆದು ಸಿಜೆಐ ಗವಾಯಿ ಅವರತ್ತ ಎಸೆಯಲು ಮುಂದಾದ. ಆದರೆ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ನ್ಯಾಯಾಲಯದಿಂದ ಹೊರಗೆ ಎಳೆದೊಯ್ದರು.

Also Read
ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ: ಇದೆಲ್ಲಾ ಪರಿಣಾಮ ಬೀರದು ಎಂದು ನ್ಯಾ. ಗವಾಯಿ ಪ್ರತಿಕ್ರಿಯೆ

ವಕೀಲರ ಕಾಯಿದೆ 1961 ಮತ್ತು ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರ ಮಾನದಂಡಗಳ ಕುರಿತಂತೆ ಬಿಸಿಐ ರೂಪಿಸಿರುವ ನಿಯಮದ ಪ್ರಕಾರ ಹೊರಡಿಸಲಾಗಿರುವ ಮಧ್ಯಂತರ ಅಮಾನತು ಆದೇಶಕ್ಕೆ ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಸಹಿ ಹಾಕಿದ್ದಾರೆ .

ಅಮಾನತು ಅವಧಿಯಲ್ಲಿ, ಕಿಶೋರ್ ಭಾರತದ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ಹಾಜರಾಗುವುದು, ಕಾರ್ಯನಿರ್ವಹಿಸುವುದು, ವಾದಿಸುವುದು ಅಥವಾ ವಕಾಲತ್ತು ವಹಿಸದಂತೆ ನಿಷೇಧ ವಿಧಿಸಲಾಗಿದೆ. ಆತನ ವಕಾಲತ್ತು ಹಕ್ಕು ಅಮಾನತುಗೊಂಡಿರುವನದನು ಎಲ್ಲಾ ನ್ಯಾಯಾಲಯಗಳಿಗೆ ತಿಳಿಸುವಂತೆ ದೆಹಲಿ ವಕೀಲರ ಪರಿಷತ್‌ಗೆ ಬಿಸಿಐ ಸೂಚಿಸಿದೆ.

ಸೋಮವಾರ ಬೆಳಿಗ್ಗೆ ನ್ಯಾಯಾಲಯ ಕಲಾಪದಲ್ಲಿ ಸಿಜೆಐ ಅವರು ತೊಡಗಿದ್ದ ವೇಳೆ ಈ ದಾಳಿ ಯತ್ನ ನಡೆದಿತ್ತು.  ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರಗೆ ಕರೆದೊಯ್ದರು. ಹಾಗೆ ಕರೆದೊಯ್ಯುವ ವೇಳೆ ಆತ "ಸನಾತನ್‌ ಕಾ ಅಪಮಾನ್‌ ನಹೀ ಸಹೇಂಗೆ" (ಸನಾತನ ಧರ್ಮಕ್ಕೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ ಎಂದು ತಿಳಿದುಬಂದಿದೆ.

Also Read
ವಿಷ್ಣುವಿನ ವಿಗ್ರಹ ಕುರಿತ ಹೇಳಿಕೆಗೆ ವಿವಾದದ ಬಣ್ಣ: ಎಲ್ಲಾ ಧರ್ಮಗಳನ್ನು ಗೌರವಿಸುವೆ ಎಂದ ಸಿಜೆಐ ಗವಾಯಿ

 ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ನೀಡಿದ್ದ ಹೇಳಿಕೆ ಇಂದಿನ ಘಟನೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಕೆಲವರು ಬಿಂಬಿಸಿದ್ದರು. ಆದರೆ ತಾನು ಅಗೌರವ ತೋರಿಲ್ಲ ಎಂದು ಸಿಜೆಐ ನಂತರ ತಿಳಿಸಿದ್ದರು. "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ... ಇದು (ಅಪಪ್ರಚಾರ) ಸಾಮಾಜಿಕ ಮಾಧ್ಯಮದಲ್ಲಿ ನಡೆದಿದೆ"  ಎಂದು ಅವರು ಹೇಳಿದ್ದರು.

Kannada Bar & Bench
kannada.barandbench.com