ವಕೀಲರ ಮೇಲೆ ಹಲ್ಲೆ: ವಕೀಲರ ಸುರಕ್ಷತಾ ಕಾಯಿದೆ ಜಾರಿಗೆ ತರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಎಎಬಿ

ರಾಜ್ಯದ ವಿವಿಧ ಭಾಗಗಳಲ್ಲಿ ವಕೀಲರ ಮೇಲೆ ಪೊಲೀಸರು ಹಾಗೂ ರೌಡಿಗಳಿಂದ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘವು ಇಂದು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿತು.
Lawyers
Lawyers

ಬೆಳಗಾವಿಯಲ್ಲಿ ಡಿಸೆಂಬರ್‌ 19ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶದಲ್ಲಿ ವಕೀಲರ ಸುರಕ್ಷತಾ ಕಾಯಿದೆಯ ಜಾರಿಗೆ ಸಂಬಂಧಿಸಿದಂತೆ ಮಸೂದೆಯನ್ನು ಮಂಡಿಸಿ ಅಂಗೀಕರಿಸದೇ ಹೋದಲ್ಲಿ ರಾಜ್ಯಾದ್ಯಂತ ವಕೀಲರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ವಕೀಲರ ಮೇಲೆ ಪೊಲೀಸರು ಹಾಗೂ ರೌಡಿಗಳಿಂದ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘವು ಇಂದು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು "ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸಿ ವಕೀಲರ ಸುರಕ್ಷತಾ ಕಾಯಿದೆ ಜಾರಿಗೆ ಸರ್ಕಾರ ಮುಂದಾಗಬೇಕು.‌ ಈ ನಿಟ್ಟಿನಲ್ಲಿ ಶನಿವಾರ (ಡಿಸೆಂಬರ್‌ 10) ರಾಜ್ಯ ವಕೀಲರ ಸಂಘದ ಎಲ್ಲಾ ಜಿಲ್ಲಾ ಘಟಕಗಳ ಪ್ರಮುಖರನ್ನು ಬೆಂಗಳೂರಿಗೆ ಕರೆಯಿಸಿಕೊಳ್ಳಲಾಗುವುದು. ರಾಜ್ಯ ವಕೀಲರ ಪರಿಷತ್ ಸಹಯೋಗದೊಂದಿಗೆ ಮಹತ್ವದ ಚರ್ಚೆ ನಡೆಸಿ ಈ ದಿಸೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸೋಮವಾರದ ಒಳಗೆ (ಡಿಸೆಂಬರ್‌ 12) ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿಯನ್ನೂ ಸಲ್ಲಿಸಲಾಗುವುದು. ಒಂದು ವೇಳೆ ಸರ್ಕಾರ ನಮ್ಮ ಮನವಿಗೆ ಕಿವಿಗೊಡದೇ ಹೋದರೆ ರಾಜ್ಯದಾದ್ಯಂತ ಉಗ್ರ ಹೋರಾಟಕ್ಕೆ ವಕೀಲರು ಸಜ್ಜಾಗಲಿದ್ದಾರೆ" ಎಂದು ಎಚ್ಚರಿಸಿದರು.

Also Read
ವಕೀಲರ ಗುಮಾಸ್ತರ ಕಲ್ಯಾಣಕ್ಕೆ ಯೋಜನೆ: ರಾಜ್ಯ ಸರ್ಕಾರ, ಕೆಎಸ್‌ಬಿಸಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಖಜಾಂಚಿ ಎಂ ಟಿ ಹರೀಶ್ ಮಾತನಾಡಿ ಗೃಹ ಸಚಿವರು ಮತ್ತು ಯುವ ಪೊಲೀಸರ ಕಾರ್ಯ ವೈಖರಿಗೆ ಕಿಡಿ ಕಾರಿದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬೆಂಗಳೂರಿನ ಗಿರಿನಗರದ ವಕೀಲ ಲಕ್ಷ್ಮೀಶ ಅವರ ಮೇಲೆ ಗೂಂಡಾಗಳು ಹಾಗೂ ಮಂಗಳೂರಿನ ವಕೀಲ ಕುಲದೀಪ್‌ ಮೇಲಿನ ಪೊಲೀಸ್‌ ದೌರ್ಜನ್ಯ ಹಾಗೂ ಇತ್ತೀಚೆಗೆ ಹಲವು ಕಡೆಗಳಲ್ಲಿ ವಕೀಲರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಯಿತು.

Related Stories

No stories found.
Kannada Bar & Bench
kannada.barandbench.com