ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ಪಿಎಸ್‌ಐ ಹಗರಣದ ರೂವಾರಿ ಆರ್‌ ಡಿ ಪಾಟೀಲ್‌ ನ್ಯಾಯಾಂಗ ಬಂಧನಕ್ಕೆ

ಕಲಬುರ್ಗಿ ನಗರದ ಫರ್ತಾಬಾದ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಆರ್‌ ಡಿ ಪಾಟೀಲ್‌ ಅವರನ್ನು ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಸ್ನೇಹ ಪಾಟೀಲ್‌ ಅವರ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
R D Patil
R D Patil
Published on

ಕಲಬುರ್ಗಿಯ ಕೇಂದ್ರೀಯ ಕಾರಾಗೃಹದಲ್ಲಿ ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಸಂಬಂಧ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ ಅವರನ್ನು ಬಾಡಿ ವಾರೆಂಟ್‌ ಮೇಲೆ ಒಂದು ದಿನ ಪೊಲೀಸ್‌ ಕಸ್ಟಡಿಗೆ ಪಡೆದು ಮಂಗಳವಾರ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಲಬುರ್ಗಿ ನಗರದ ಫರ್ತಾಬಾದ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಆರ್‌ ಡಿ ಪಾಟೀಲ್‌ ಅವರನ್ನು ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಸ್ನೇಹ ಪಾಟೀಲ್‌ ಅವರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಘಟನೆಯ ಸಂಬಂಧ ಮಾಹಿತಿ ಪಡೆದ ನ್ಯಾಯಾಧೀಶರು ಮಂಗಳವಾರ ಒಂದು ದಿನ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿದ್ದರು.

ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು.

ಪ್ರಕರಣದ ಹಿನ್ನೆಲೆ: 2023ರ ಅಕ್ಟೋಬರ್‌ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ನಡೆದಿದ್ದು, ಅಂದು ಬ್ಲೂಟೂತ್‌ ಸಹಾಯದಿಂದ ಪರೀಕ್ಷಾ ಕೊಠಡಿಯಲ್ಲಿದ್ದ ಅಭ್ಯರ್ಥಿಗಳಿಗೆ ಆರ್‌ ಡಿ ಪಾಟೀಲ್‌, ಅಂಬರೀಶ್‌ ಮತ್ತು ತ್ರಿಮೂರ್ತಿ ತಳವಾರ್‌ ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಿ ಕೊಠಡಿ ಮೇಲ್ವಿಚಾರಕಿಯಾದ ಸಹಾಯಕ ಉಪನ್ಯಾಸಕಿ ಶಿಲ್ಪಾ ಅವರು ದೂರು ನೀಡಿದ್ದರು. ಇದರ ಅನ್ವಯ ಕಲಬುರ್ಗಿಯ ಅಶೋಕ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 420,120B, 109, 114, 36, 37, 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಡಿ) ಅಡಿ ಆರ್‌ ಡಿ ಪಾಟೀಲ್‌ ಒಳಗೊಂಡು ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರ್‌ ಡಿ ಪಾಟೀಲ್‌ಗೆ ಸುಪ್ರೀಂ ಕೋರ್ಟ್‌ 19.11.2025ರಂದು ಮೂರು ವಾರಗಳ ಜಾಮೀನು ಮಂಜೂರು ಮಾಡಿತ್ತು. ಈ ವಿಚಾರವನ್ನು ಕಲಬುರ್ಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಗಮನಕ್ಕೆ ತರಲಾಗಿತ್ತು. ಇದರ ಅನ್ವಯ ಅವರು ಸಂಜೆ ನಾಲ್ಕು ಗಂಟೆಗೆ ಆರ್‌ ಡಿ ಪಾಟೀಲ್‌ ಬಿಡುಗಡೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದಾಗ್ಯೂ, 21.11.2025ರಂದು ಜೈಲಿನಲ್ ಮಧ್ಯರಾತ್ರಿ 12 ಗಂಟೆ ವೇಳೆಗೆ ಆರ್‌ ಡಿ ಪಾಟೀಲ್‌ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದನ್ನು ಪೊಲೀಸರು ನಿರಾಕರಿಸಿ, ಸಿಸಿಟಿವಿ ತುಣುಕು ಸಲ್ಲಿಸಿದ್ದರು. ಅಲ್ಲದೇ, ಪೊಲೀಸ್‌ ಸಿಬ್ಬಂದಿಯ ಮೇಲೆ ಆರ್‌ ಡಿ ಪಾಟೀಲ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಫರ್ತಾಬಾದ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 115(2), 132, 351(2) ಮತ್ತು 352ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಜಾ ಕೋರಿ ಆರ್‌ ಡಿ ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ವಜಾಗೊಳಿಸಿತ್ತು.

ಇದರ ಬೆನ್ನಿಗೇ, ಪೊಲೀಸರು ಫರ್ತಾಬಾದ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಒಂದು ದಿನ ಬಾಡಿ ವಾರೆಂಟ್‌ ಮೇಲೆ ಆರ್‌ ಟಿ ಪಾಟೀಲ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪೊಲೀಸ್‌ ಕಸ್ಟಡಿಗೆ ಪಡೆದು ಆನಂತರ ಮರಳಿ ಅವರನ್ನು ನ್ಯಾಯಾಲಯದ ನಿರ್ದೇಶನದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Kannada Bar & Bench
kannada.barandbench.com