ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಕ ಹುದ್ದೆ ಪಡೆಯಲು ಯತ್ನ: ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅರ್ಜಿದಾರರು ಹಿಂದುಳಿದ ವರ್ಗದ ಅಡಿ ಬರುವ (ಮೊಗೇರ) ಜಾತಿಗೆ ಸೇರಿದ್ದು, ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ತಪ್ಪೆಸಗಿರುವ ಅಂಶ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ನೀಡಲಾಗದು ಎಂದ ಹೈಕೋರ್ಟ್.
High Court of Karnataka
High Court of Karnataka

ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಜಾತಿಗೆ (ಮೊಗೇರ) ಸೇರಿದ್ದರೂ ಪರಿಶಿಷ್ಟ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಕನ್ನಡ ಶಿಕ್ಷಕರ ಹುದ್ದೆ ಗಿಟ್ಟಿಸಲು ಮುಂದಾಗಿದ್ದ ಶಿಕ್ಷಕಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಈಚೆಗೆ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬಂಗೆರೆ ನಿವಾಸಿ ಸರಸ್ವತಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ.

ಅರ್ಜಿದಾರರು ಹಿಂದುಳಿದ ವರ್ಗದ ಅಡಿ ಬರುವ (ಮೊಗೇರ) ಜಾತಿಗೆ ಸೇರಿದ್ದು, ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ತಪ್ಪೆಸಗಿರುವ ಅಂಶ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ನ್ಯಾಯಾಲಯವು ಅರ್ಜಿ ವಜಾ ಮಾಡಿದೆ.

ಅರ್ಜಿದಾರರ ಪರ ವಕೀಲರು, ಹಿಂದೂ ಮೊಗೇರ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದೆ. ಹೀಗಾಗಿ ಜಾತಿ ಪರಿಶೀಲನಾ ಸಮಿತಿ ನಿರ್ದೇಶನದಂತೆ ನಾಗರಿಕ ಹಕ್ಕು ನಿರ್ದೇಶನಾಲಯ ಸಲ್ಲಿಕೆ ಮಾಡಿರುವ ದೂರು ರದ್ದುಪಡಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಕೀಲರು ಮೇಲ್ಮವಿದಾರರ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಕ ಹುದ್ದೆ ಪಡೆದುಕೊಳ್ಳದಿದ್ದರೂ, ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸುವುದೇ ಅಪರಾಧ. ಹೀಗಾಗಿ ಅರ್ಜಿ ವಜಾಗೊಳಿಸಬೇಕು. ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಪೀಠಕ್ಕೆ ಕೋರಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮೊಗೇರ (ಹಿಂದುಳಿದ ವರ್ಗಗಳು) ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿಗೆ ಸೇರಿರುವ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಮೇಲ್ಮನವಿದಾರರ ಮೊಗೇರ ಜಾತಿಗೆ ಸೇರಿದವರಾಗಿದ್ದು, ಪರಿಶಿಷ್ಟ ಜಾತಿ ಹೆಸರಿನಲ್ಲಿ ತಹಶೀಲ್ದಾರ್ ಕಚೇರಿಗೆ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ಅರ್ಜಿದಾರರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ್ದರು. ಇದಾದ ನಂತರ ಜಿಲ್ಲಾ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯಿದೆ ಅಡಿ ದೂರು ದಾಖಲಿಸಿದ್ದರು.

ಪೊಲೀಸರು ಮೇಲ್ಮನವಿದಾರರ ವಿರುದ್ಧ ತನಿಖೆ ನಡೆಸಿ ಆರೋಪಪಟ್ಟಿಯನ್ನು ಕಾರವಾರದ 2ನೇ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.

Related Stories

No stories found.
Kannada Bar & Bench
kannada.barandbench.com