

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯದರ್ಶಿ ಶಿವಕುಮಾರ್ ಸಿ ಎಲ್ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ (ಕೆಐಸಿ) ಶಿಫಾರಸ್ಸು ಮಾಡಿದ ಶಿಸ್ತು ಕ್ರಮ ಆದೇಶ ಬದಿಗೆ ಸರಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಅಧಿಕಾರಿಯ ನಡವಳಿಕೆ ಒಪ್ಪಲಾಗದು ಮತ್ತು ನ್ಯಾಯಾಲಯಕ್ಕೆ "ವಂಚಿಸುವ" ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಟುವಾಗಿ ನುಡಿದಿದೆ.
ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ₹25,000 ದಂಡ ವಿಧಿಸಿ, ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿರುವ ಕೆಐಸಿಯ ಆದೇಶಗಳನ್ನು ಪ್ರಶ್ನಿಸಿ ಬಿಡಿಎ ಕಾರ್ಯದರ್ಶಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
"ಕರ್ನಾಟಕ ಮಾಹಿತಿ ಆಯುಕ್ತರು ಕರ್ನಾಟಕ ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸುವ ಉಸ್ತುವಾರಿ ಹೊಂದಿರುವ ಅರೆ-ನ್ಯಾಯಾಂಗ ಪ್ರಾಧಿಕಾರವಾಗಿದ್ದಾರೆ. ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳು ಕೆಐಸಿ ಹೊರಡಿಸಿದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ.
ಕೆಐಸಿಯ ನಿರ್ದೇಶನಗಳನ್ನು ಪಾಲಿಸದಿರುವುದು ಮಾತ್ರವಲ್ಲದೆ, ಪದೇ ಪದೇ ನಿರ್ದೇಶಿಸಿದರೂ ಅರ್ಜಿದಾರರ ಪರವಾಗಿ ಆಯೋಗದ ಮುಂದೆ ಯಾರೂ ಹಾಜರಾಗಿಲ್ಲ ಎಂದು ನ್ಯಾಯಾಲಯ ಅತೃಪ್ತಿ ದಾಖಲಿಸಿದೆ.
"ಕೆಐಸಿ ಪ್ರಕರಣ ಕೈಗೆತ್ತಿಕೊಂಡ ದಿನಾಂಕಗಳಂದು, ಅರ್ಜಿದಾರರ ಕಡೆಯಿಂದ ಯಾವುದೇ ಸ್ಪಂದನೆಯಾಗದಿರುವುದನ್ನು ಕಾನೂನು ಅಥವಾ ವಾಸ್ತವದಲ್ಲಿ ಸಮರ್ಥಿಸಲಾಗದು. ವಾಸ್ತವವಾಗಿ, ಅಂತಹ ನಡವಳಿಕೆಯನ್ನು ಒಪ್ಪಲಾಗದು, ಈ ನ್ಯಾಯಾಲಯವು ಅದನ್ನು ಒಪ್ಪುವುದಿಲ್ಲ" ಎಂದು ಪೀಠ ಹೇಳಿದೆ.
ಪ್ರತಿವಾದಿ ಸುರೇಶ್ ಚಂದ್ರ ಬಾಬು ಅವರು ಕೆಲವು ಮಾಹಿತಿ ಕೋರಿ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ನಿಗದಿತ ಅವಧಿಯೊಳಗೆ ಮಾಹಿತಿಯನ್ನು ಒದಗಿಸದ ಕಾರಣ, ಬಾಬು ಮಾರ್ಚ್ 9, 2023 ರಂದು ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರಿಗೂ ಹಿಂದೆ ಇದ್ದ ಕಾರ್ಯದರ್ಶಿಯು ಮೇ 5, 2023 ರಂದು ಕೆಲವು ಕ್ರಮಗಳನ್ನು ಪ್ರಾರಂಭಿಸಿದ್ದರೂ, ಮೇಲ್ಮನವಿಯ ಕುರಿತು ಯಾವುದೇ ಅಂತಿಮ ಆದೇಶ ಮಾಡಿರಲಿಲ್ಲ.
ಅರ್ಜಿದಾರರನ್ನು ಮೇ 7, 2025 ರಂದು ಬಿಡಿಎ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಮೇ 8, 2025 ರಂದು ಅಧಿಕಾರ ವಹಿಸಿಕೊಂಡಿದ್ದರು., ಇದರ ಭಾಗವಾಗಿ ಅವರು ಆರ್‌ಟಿಐ ಕಾಯಿದೆ ಅಡಿ ಮೊದಲ ಮೇಲ್ಮನವಿ ಪ್ರಾಧಿಕಾರವಾಗಿದ್ದರು. ಅದಾಗ್ಯೂ, ಅವರು ಅಧಿಕಾರ ವಹಿಸಿಕೊಂಡ ನಂತರವೂ, ಬಾಕಿ ಇರುವ ಮೇಲ್ಮನವಿಯ ಮೇಲೆ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
"9.3.2023 ರಿಂದ ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ ಬಾಕಿ ಇರುವ ಮೇಲ್ಮನವಿಯ ಸಂಬಂಧ 8.5.2025 ರ ನಂತರವೂ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಹೀಗಾಗಿ, 1.1.2026 ರಂದು ಕೆಐಸಿ ಆದೇಶ ಮಾಡಿದೆ” ಎಂದು ನ್ಯಾಯಾಲಯ ಹೇಳಿದೆ.
ಕೆಐಸಿ ಮುಂದೆ ಜುಲೈ 8, ಆಗಸ್ಟ್ 12 ಮತ್ತು ನವೆಂಬರ್ 5, 2025 ರಂದು ವಿಚಾರಣೆ ನಡೆದಿದ್ದು, ಈ ಸಮಯದಲ್ಲಿ ಅರ್ಜಿದಾರರ ಪರವಾಗಿ ಯಾವುದೇ ಪ್ರಾತಿನಿಧ್ಯವಿರಲಿಲ್ಲ. ಅಲ್ಲದೇ ಪ್ರತಿವಾದಿ ಸುರೇಶ್ ಚಂದ್ರ ಬಾಬು ಕೋರಿದ್ದ ಮಾಹಿತಿಯನ್ನು ಒದಗಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರ ಪರಿಣಾಮ ಜನವರಿ 1, 2026 ರಂದು, ಕೆಐಸಿಯು ₹25,000 ದಂಡ ವಿಧಿಸಿ, ಮಾಹಿತಿ ಒದಗಿಸುವಂತೆ ನಿರ್ದೇಶಿಸಿತು. ಫೆಬ್ರವರಿ 10, 2026ರಂದು ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ಆಯೋಗದ ಮುಂದೆ ಶಿವಕುಮಾರ್ ಹಾಜರಾಗಿಲ್ಲ ಎಂಬುದನ್ನು ಪರಿಗಣಿಸಿ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು.
ಅರ್ಜಿದಾರರ ಪರ ವಕೀಲ ಎಂ ವಿ ಚರಟಿ ಅವರು “ಅರ್ಜಿದಾರರಿಗಿಂತ ಹಿಂದೆ ಇದ್ದ ಅಧಿಕಾರಿಯ ಸೇವಾವಧಿಯಲ್ಲಿ ವಿಳಂಬವಾಗಿದ್ದು, ಅರ್ಜಿದಾರರು ಮೇ 8, 2025ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅರ್ಜಿದಾರರು ಸಾರ್ವಜನಿಕ ಮಾಹಿತಿ ಅಧಿಕಾರಿಯಲ್ಲ, ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿರುವುದರಿಂದ 2023ರಲ್ಲಿ ನಡೆದಿರುವ ಮಾಹಿತಿ ನಿರಾಕರಣೆಗೆ ಹೊಣೆಗಾರರಾಗಲು ಸಾಧ್ಯವಿಲ್ಲ. ಮಾರ್ಚ್ 12, 2026ರಂದು, ಅರ್ಜಿದಾರರು ಉಪ ಕಾರ್ಯದರ್ಶಿಗೆ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದಾರೆ” ಎಂದರು.
ಅದಾಗ್ಯೂ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು. "ಅರ್ಜಿದಾರರು 8.5.2025 ರಂದು ಅಧಿಕಾರ ವಹಿಸಿಕೊಂಡ ನಂತರವೂ, ಉಳಿದ ವರ್ಷಕ್ಕೆ, ಅಂದರೆ ಮೇನಿಂದ ಡಿಸೆಂಬರ್ 2025 ರವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಅರ್ಜಿದಾರರು ಉಪ ಕಾರ್ಯದರ್ಶಿಗೆ ಬರೆದ ಪತ್ರವು 12.3.2026ರ ದಿನಾಂಕ ಹೊಂದಿದೆ. ಅದೂ 1.1.2026ರಂದು ಆಯೋಗ ಆದೇಶ ಹೊರಡಿಸಿದ ಬಳಿಕ ಪತ್ರ ಬರೆಯಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
"12.3.2026 ರಂದು ಬರೆದ ಪತ್ರವನ್ನು ಆಧರಿಸಿರುವುದು ಸಂಪೂರ್ಣವಾಗಿ ತಪ್ಪು ಮಾಹಿತಿಯಾಗಿದ್ದು, ನ್ಯಾಯಾಲಯದ ಅಭಿಪ್ರಾಯದಲ್ಲಿ ಇದು ನ್ಯಾಯಾಲಯವನ್ನು ವಂಚಿಸುವ ಪ್ರಯತ್ನವಾಗಿದೆ, ಇದಕ್ಕೆ ಅನುಮತಿಸಲಾಗದು" ಎಂದು ಪೀಠ ಹೇಳಿದರು.
ವಿಚಾರಣೆಯ ಸಮಯದಲ್ಲಿ, ಅಧಿಕಾರ ವಹಿಸಿಕೊಂಡ ನಂತರ ನಿಷ್ಕ್ರಿಯತೆಯ ಬಗ್ಗೆಯೂ ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು. "45 ದಿನಗಳ ಒಳಗೆ ಪ್ರತಿವಾದಿಯ ಕೋರಿಕೆಗೆ ಉತ್ತರಿಸಬೇಕು. ಮೇಲ್ಮನವಿಯ ಸಂಬಂಧ ಯಾವ ಕ್ರಮಕೈಗೊಂಡಿದ್ದೀರಿ? ನೀವು ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿದ್ದೀರಿ. ಮೊದಲ ಮೇಲ್ಮನವಿಯನ್ನು 9.3.2023 ರಂದು ಸಲ್ಲಿಸಲಾಗಿದ್ದು, ಅದರ ನಂತರ ನೀವು ಏನು ಮಾಡಿದ್ದೀರಿ? ... 8.5.2025 ರಿಂದ 1.1.2026 ರವರೆಗೆ, ನೀವು ಏನು ಮಾಡಿದ್ದೀರಿ?" ನ್ಯಾಯಾಲಯ ಕಟುವಾಗಿ ಪ್ರಶ್ನಿಸಿತು.
ಅಧಿಕಾರಿಯ ಮುಂದೆ ಇರಿಸಿದಾಗ ಮಾತ್ರ ಹಿಂದಿನ ಫೈಲ್‌ಗಳು ಗಮನಕ್ಕೆ ಬರುತ್ತವೆ ಎಂಬ ಅರ್ಜಿದಾರರ ಉತ್ತರಕ್ಕೆ ಪೀಠವು ಅಧಿಕಾರಿಗಳು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪೀಠವು ಹೇಳಿತು.
"ಮೇಲ್ಮನವಿಯನ್ನು ಬುಡಕ್ಕೆ ಹಾಕಿಕೊಂಡು ಕುಳಿತುಕೊಳ್ಳುತ್ತೀರಾ? ಶಿಸ್ತು ಕ್ರಮಕ್ಕೆ ಆದೇಶ ಮಾಡಿರುವುದನ್ನು ಹಿಂಪಡೆಯಲು ಅನುಮತಿಸಲಾಗದು.. ನಿಮ್ಮ ಕಚೇರಿಯಲ್ಲಿನ ವ್ಯವಸ್ಥೆ ಸರಿಪಡಿಸಿ. ನೀವು ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿರುವುದರಿಂದ ನಿಮಗೆ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ರೂಪಿಸಿ" ಎಂದ ನ್ಯಾಯಾಲಯವು ಕೆಐಸಿಯ ಆದೇಶಗಳಲ್ಲಿ ಯಾವುದೇ ನ್ಯೂನತೆ ಕಂಡುಬಂದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.
2023ರ ಮಾರ್ಚ್ 9ರಿಂದ ಶಿವಕುಮಾರ್ ಅವರು ಮೇ 2025ರವರೆಗೆ ಅಧಿಕಾರವಹಿಸಿಕೊಳ್ಳುವವರೆಗೆ ಇದ್ದ ಅಧಿಕಾರಿಯ ವಿರುದ್ಧ ಸಕ್ಷಮ ಪ್ರಾಧಿಕಾರ ಕ್ರಮಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದೆ ಎಂದೂ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.