ನ್ಯಾ. ಕಾಟ್ಜು ಅವರ ವಿರುದ್ದದ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರದಲ್ಲಿ ಹಿಂದೆ ಸರಿದ ಅಟಾರ್ನಿ ಜನರಲ್

ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 15 (3) ರ ವಿವರಣೆ ʼಎʼ ಪ್ರಕಾರ ಸಾಲಿಸಿಟರ್ ಜನರಲ್ ಅವರು ಕೂಡ ಒಪ್ಪಿಗೆ ನೀಡುವ ಅಧಿಕಾರ ಹೊಂದಿದ್ದಾರೆ ಎಂದು ಎಜಿ ಸ್ಪಷ್ಟಪಡಿಸಿದ್ದಾರೆ.
ನ್ಯಾ. ಕಾಟ್ಜು ಅವರ ವಿರುದ್ದದ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರದಲ್ಲಿ ಹಿಂದೆ ಸರಿದ ಅಟಾರ್ನಿ ಜನರಲ್

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್‌ (ಎಜಿ) ಕೆ ಕೆ ವೇಣುಗೋಪಾಲ್‌ ನಿರಾಕರಿಸಿದ್ದಾರೆ. ಕಾಟ್ಜು ಅವರು ಹದಿನಾರು ವರ್ಷಗಳಿಂದಲೂ ಪರಿಚಿತರು. ಅಂದಿನಿಂದ ಇಂದಿನವರೆಗೆ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಆದ್ದರಿಂದ ನಾನು ಈ ಪ್ರಕರಣ ನಿಭಾಯಿಸುವುದು ಸೂಕ್ತವಲ್ಲ ಎಂದು ಎಜಿ ಅವರು ಹೇಳಿದ್ದಾರೆ. ಹೀಗಾಗಿ ಸಾಲಿಸಿಟರ್‌ ಜನರಲ್‌ ಅವರಿಗೆ ಮನವಿ ಸಲ್ಲಿಸುವಂತೆ ಅವರು ಅರ್ಜಿದಾರ ಹಾಗೂ ಸುಪ್ರೀಂಕೋರ್ಟ್‌ ವಕೀಲ ಅಲಖ್‌ ಅಲೋಕ್‌ ಶ್ರೀವಾಸ್ತವ ಅವರಿಗೆ ಸೂಚಿಸಿದ್ದಾರೆ. ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 15 (3) ರ ವಿವರಣೆ ʼಎʼ ಪ್ರಕಾರ ಸಾಲಿಸಿಟರ್‌ ಜನರಲ್‌ ಅವರು ಕೂಡ ಒಪ್ಪಿಗೆ ನೀಡುವ ಅಧಿಕಾರ ಹೊಂದಿದ್ದಾರೆ ಎಂದು ಎಜಿ ಸ್ಪಷ್ಟಪಡಿಸಿದ್ದಾರೆ.

ವಜ್ರ ವ್ಯಾಪಾರಿ ನೀರವ್‌ ಮೋದಿ ಹಸ್ತಾಂತರ ಪ್ರಕರಣದಲ್ಲಿ ಕಾಟ್ಜು ಅವರು ಅತೀವ ನ್ಯಾಯಾಂಗ ನಿಂದನೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಶ್ರೀವಾಸ್ತವ ಅವರು ಮಾರ್ಚ್‌ ಒಂದರಂದು ವೇಣುಗೋಪಾಲ್‌ ಅವರಿಗೆ ಪತ್ರ ಬರೆದಿದ್ದರು. ಪಿಎನ್‌ಬಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದ ಕಾಟ್ಜು ಅವರು ʼಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯುತ್ತದೆ ಎಂದು ಹೇಳಲಾಗದುʼ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಶ್ರೀವಾಸ್ತವ ಪತ್ರದಲ್ಲಿ ದೂರಿದ್ದರು.

Also Read
ಏಳನೇ ಬಾರಿಗೆ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಇಂಗ್ಲೆಂಡ್‌ ನ್ಯಾಯಾಲಯ

ಇದೊಂದು ಉದ್ದೇಶಪೂರ್ವಕವಾಗಿ ಬೇಕಂತಲೇ ಮಾಡಿದ ಅವಹೇಳನ. ಕಾಟ್ಜು ಅವರು ಈ ಕುರಿತು ದೀರ್ಘವಾದ ಸುದ್ದಿಗೋಷ್ಠಿಯನ್ನೂ ನಡೆಸಿ ಮಾಧ್ಯಮಗಳಿಗೆ ವಿವರಿಸಿದ್ದರು ಎಂಬುದಾಗಿ ಅವರು ಪತ್ರದಲ್ಲಿ ಹೇಳಿದ್ದರು.

ನೀರವ್‌ ಮೋದಿ ಹಸ್ತಾಂತರ ಆದೇಶ ನೀಡುವ ಸಂದರ್ಭದಲ್ಲಿ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಧೀಶ ಸ್ಯಾಮ್‌ ಗೂಜ್‌ ಅವರು “ಕಾಟ್ಜು ನುಡಿದ ಸಾಕ್ಷ್ಯ ವಿಶ್ವಾಸಾರ್ಹವಲ್ಲ ಮತ್ತು ವೈಯಕ್ತಿಕ ಹಿತಾಸಕ್ತಿಯೊಂದಿಗೆ ಎಲ್ಲೆ ಮೀರಿ ಮಾತನಾಡುವ ವಿಮರ್ಶಕರ ಲಕ್ಷಣ ಅದಕ್ಕಿದೆ” ಎಂದು ಖಂಡಿಸಿದ್ದರು.

ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್ 15 ಮತ್ತು ಸುಪ್ರೀಂ ಕೋರ್ಟ್‌ ಅವಹೇಳನ ನಿಯಂತ್ರಣ ನಿಯಮಾವಳಿಗಳ ನಿಯಮ 3ರ ಪ್ರಕಾರ ಖಾಸಗಿ ವ್ಯಕ್ತಿಗಳು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಮುನ್ನ ಅಟಾರ್ನಿ ಜನರಲ್‌ ಅಥವಾ ಸಾಲಿಸಿಟರ್‌ ಜನರಲ್‌ ಅವರ ಒಪ್ಪಿಗೆ ಪಡೆಯಬೇಕಿದೆ.

Related Stories

No stories found.
Kannada Bar & Bench
kannada.barandbench.com