ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ: ಪತ್ನಿ ನಿಖಿತಾ, ಆಕೆಯ ತಾಯಿ, ಸಹೋದರ 14 ದಿನಗಳ ನ್ಯಾಯಾಂಗ ಬಂಧನಕ್ಕೆ

ಅತುಲ್‌ ಅವರು ವಿಸ್ತೃತವಾದ ಮರಣ ಪತ್ರ ಬರೆದಿದ್ದು, ವಿಡಿಯೋದಲ್ಲಿ ತಮ್ಮ ಪರಿತ್ಯಕ್ತ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.
Jail
Jail
Published on

ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆತನ ಪರಿತ್ಯಕ್ತ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ತಾಯಿ ಮತ್ತು ಸಹೋದರನನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 14 ದಿನಗಳ ಕಾಲ ಭಾನುವಾರ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಭಾನುವಾರ 29ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಂದೀಪ್‌ ಪಾಟೀಲ್‌ ಅವರ ನಿವಾಸದಲ್ಲಿ ಹಾಜರುಪಡಿಸಿದರು.

ಘಟನೆಯ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

ನಿಖಿತಾ ಅವರನ್ನು ಹರಿಯಾಣದ ಗುರುಗ್ರಾಮದ ಪಿ ಜಿಯಲ್ಲಿ ಬಂಧಿಸಿದರೆ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್‌ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್‌ ಬಳಿ ಬಂಧಿಸಿ, ಶನಿವಾರ ರಾತ್ರಿ ಅವರನ್ನು ಮಾರತ್‌ಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದರು.

ನಿಖಿತಾ ಸಂಬಂಧಿ ಸುಶೀಲ್‌ ಸಿಂಘಾನಿಯಾ ಮತ್ತು ಇನ್ನೊಬ್ಬರು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಡಿಸೆಂಬರ್‌ 29ರಂದು 34 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ಅತುಲ್‌ ಅವರು ಸುದೀರ್ಘವಾದ ಮರಣ ಪತ್ರ ಹಾಗೂ ವಿಡಿಯೋ ಮಾಡಿ ಅದರಲ್ಲಿ ಪತ್ನಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 108 (ಆತ್ಮಹತ್ಯೆಗೆ ಪ್ರಚೋದನೆ), 3(5) (ಏಕೈಕ ಉದ್ದೇಶದಿಂದ ಕ್ರಿಮಿನಲ್‌ ಕೃತ್ಯ) ಅಡಿ ನಿಖಿತಾ ಮತ್ತು ಆಕೆಯ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Kannada Bar & Bench
kannada.barandbench.com