ಸುಪ್ರೀಂ ಕೋರ್ಟ್ ಕೊಲಿಜಿಯಂ ಆ.17ರಂದು ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಶಿಫಾರಸ್ಸು ಮಾಡಿದ ಒಂಭತ್ತು ಮಂದಿಯ ಹೆಸರುಗಳು ತಮ್ಮ ವೈವಿಧ್ಯತೆ ಹಾಗೂ ವಿಸ್ತೃತ ಭಾರತದ ಪ್ರಾತಿನಿಧಿಕ ಸ್ವರೂಪದ ಕಾರಣದಿಂದಾಗಿ ಗಮನಾರ್ಹವಾಗಿವೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಪದವಿಗೆ ಎರಡು ವರ್ಷದ ತರುವಾಯ ಕೊಲಿಜಿಯಂ ಅಂಗೀಕರಿಸಿರುವ ನಿರ್ಣಯ ಇದಾಗಿದೆ. ಈ ಹಿಂದೆ 2019ರ ಆಗಸ್ಟ್ 28 ರಂದು ನಾಲ್ವರು ನ್ಯಾಯಮೂರ್ತಿಗಳ ಹೆಸರನ್ನು ಕೊಲಿಜಿಯಿಂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಇದೇ ಮೊದಲನೆಯ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಒಂಭತ್ತು ಮಂದಿ ನ್ಯಾಯಮೂರ್ತಿಗಳ ಹೆಸರನ್ನು ಒಮ್ಮೆಲೇ ಶಿಫಾರಸ್ಸು ಮಾಡಲಾಗಿದೆ.
ಆಸಕ್ತಿಕರ ಸಂಗತಿಯೆಂದರೆ, ಮೂವರು ಮಹಿಳಾ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡಿರುವುದು ಸಹ ಇದೇ ಮೊದಲ ಸಲವಾಗಿದೆ. ಈ ಬಾರಿಯ ನಿರ್ಣಯದಲ್ಲಿ ವಿವಿಧ ಸಮುದಾಯಗಳು ಮತ್ತು ರಾಜ್ಯಗಳಿಗೆ ಸೇರಿದ ಹೆಸರುಗಳಿವೆ.
ಶಿಪಾರಸ್ಸು ಮಾಡಿರುವ ಒಂಭತ್ತು ಮಂದಿಯು ಒಂಭತ್ತು ವಿಭಿನ್ನ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ರಾಜ್ಯಗಳೆಂದರೆ, ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ ಮತ್ತು ಗುಜರಾತ್.
ಇವರಲ್ಲಿ ನಾಲ್ಕು ಮಂದಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರೆ ಉಳಿದ ಐವರು ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗ, ಬನಿಯಾ, ಖತ್ರಿ ಮತ್ತು ಕಾಯಸ್ಥ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಈ ಅಂಶಗಳ ಕುರಿತಾದ ಮಾಹಿತಿ ಇಲ್ಲಿದೆ:
ನ್ಯಾ, ಸಿ ಟಿ ರವಿಕುಮಾರ್ - ಪರಿಶಿಷ್ಟ ಜಾತಿ, ಕೇರಳ
ನ್ಯಾ. ಎಂ ಎಂ ಸುಂದರೇಶ್ - ಇತರೆ ಹಿಂದುಳಿದ ವರ್ಗ, ತಮಿಳುನಾಡು
ನ್ಯಾ. ಹಿಮಾ ಕೊಹ್ಲಿ - ಖತ್ರಿ, ದೆಹಲಿ
ನ್ಯಾ. ವಿಕ್ರಮ್ ನಾಥ್ - ಕಾಯಸ್ಥ, ಉತ್ತರಪ್ರದೇಶ
ನ್ಯಾ. ಜೆ ಕೆ ಮಹೇಶ್ವರಿ - ಬನಿಯಾ, ಮಧ್ಯಪ್ರದೇಶ
ನ್ಯಾ. ಬಿ ವಿ ನಾಗರತ್ನ - ಬ್ರಾಹ್ಮಣ, ಕರ್ನಾಟಕ
ನ್ಯಾ. ಬೇಲಾ ತ್ರಿವೇದಿ - ಬ್ರಾಹ್ಮಣ, ಗುಜರಾತ್
ನ್ಯಾ. ಎ ಎಸ್ ಓಕಾ - ಬ್ರಾಹ್ಮಣ, ಮಹಾರಾಷ್ಟ್ರ
ಹಿರಿಯ ವಕೀಲ ಪಿ ಎಸ್ ನರಸಿಂಹ - ಬ್ರಾಹ್ಮಣ, ಆಂಧ್ರಪ್ರದೇಶ