ಓಲಾ ಆಟೋರಿಕ್ಷಾ ಸೇವೆ: ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಶೇ. 10 ದರ ವಿಧಿಸಲು ಓಲಾ, ಉಬರ್‌ಗೆ ಹೈಕೋರ್ಟ್ ಸೂಚನೆ

ಸಾರ್ವಜನಿಕರೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಯೋಗ್ಯ ಅವಕಾಶ ಕಲ್ಪಿಸಿ, 10-15 ದಿನಗಳಲ್ಲಿ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ನ್ಯಾಯಯುತ ದರ ವಿಧಿಸಲು ಸರ್ಕಾರ ಮುಕ್ತವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಎಜಿ ನಾವದಗಿ.
Ola, Uber and Karnataka HC
Ola, Uber and Karnataka HC

ಆಟೋರಿಕ್ಷಾ ಸೇವೆಗಳಿಗೆ 2021ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ದರ ಮತ್ತು ಸರಕು ಹಾಗೂ ಸೇವಾ ತೆರಿಗೆಯನ್ನು ವಿಧಿಸುವ ಮೂಲಕ ಆ್ಯಪ್‌ ಆಧರಿತ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಮುಂದುವರಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶ ಮಾಡಿದೆ.

ಓಲಾ ಮತ್ತು ಉಬರ್‌ ಇನ್ನು ಮುಂದೆ ತಮ್ಮ ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಸಾರ್ವಜನಿಕರೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಯೋಗ್ಯ ಅವಕಾಶ ಕಲ್ಪಿಸಿ, 10-15 ದಿನಗಳಲ್ಲಿ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ನ್ಯಾಯಯುತ ದರ ವಿಧಿಸಲು ರಾಜ್ಯ ಸರ್ಕಾರ ಮುಕ್ತವಾಗಿದ್ದು, ಸಿದ್ಧವಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ವಾದವನ್ನು ಆಲಿಸಿ ಪೀಠವು ಆದೇಶ ಮಾಡಿತು.

“ನ್ಯಾಯಯುತ ದರ ಕುರಿತು ರಾಜ್ಯ ಸರ್ಕಾರವು ಸ್ಪಷ್ಟ ನಿಲುವು ತಳೆಯುವವರೆಗೆ ಅರ್ಜಿದಾರ ಕಂಪೆನಿಗಳ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳುವಂತಿಲ್ಲ. ಕಾನೂನಿನ ಅನ್ವಯ ಅರ್ಜಿದಾರ ಕಂಪೆನಿಗಳು ತಮ್ಮ ಪರವಾನಗಿ ನವೀಕರಣ ಮಾಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರ ಪರವಾಗಿ ಕಾಯ್ದಿರಿಸಲಾಗಿದೆ” ಎಂದು ಪೀಠ ಆದೇಶ ಮಾಡಿದ್ದು, ವಿಚಾರಣೆಯನ್ನು ನವೆಂಬರ್‌ 7ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ನಾವದಗಿ ಅವರು “ನ್ಯಾಯಾಲಯದ ಸೂಚನೆಯಂತೆ ಗುರುವಾರ ಮಧ್ಯಾಹ್ನ ಸಭೆ ನಡೆಸಿದರೂ ಯಾವುದೇ ಒಮ್ಮತ ಸಾಧಿಸಲಾಗಲಿಲ್ಲ. ಮುಂದಿನ 15 ದಿನಗಳಲ್ಲಿ ಅಪ್ಲಿಕೇಶನ್‌ ಆಧರಿತ ಆಟೋರಿಕ್ಷಾಗಳಿಗೆ ಮೋಟಾರು ವಾಹನ ಕಾಯಿದೆ ಸೆಕ್ಷನ್‌ 67ರ ಅಡಿ ನ್ಯಾಯಯತ ದರ ವಿಧಿಸಲಾಗುವುದು. ಅಲ್ಲಿಯವರೆಗೆ 2021ರ ನವೆಂಬರ್‌ 6ರಂದು ದರ ಕುರಿತು ಅಧಿಸೂಚನೆ ಹೊರಡಿಸಿರುವುದಕ್ಕೆ ಅರ್ಜಿದಾರ ಕಂಪೆನಿಗಳು ಬದ್ಧವಾಗಿರಬೇಕು” ಎಂದರು.

ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಮತ್ತು ನಂದಕುಮಾರ್‌ ಅವರು “ರಾಜ್ಯ ಸರ್ಕಾರವು 2021ರ ನವೆಂಬರ್‌ನಲ್ಲಿ ದರ ಕುರಿತು ಹೊರಡಿಸಿರುವ ಅಧಿಸೂಚನೆಯು ಭಾರಿ ನಷ್ಟ ಉಂಟು ಮಾಡಲಿದೆ” ಎಂದರು.

Also Read
ಓಲಾ, ಉಬರ್ ಆಟೋರಿಕ್ಷಾ ಸೇವೆ ಸ್ಥಗಿತ: ನ್ಯಾಯಯುತ ದರ ವಿಚಾರದಲ್ಲಿ ಒಮ್ಮತ ಸಾಧಿಸಲು ಹೈಕೋರ್ಟ್‌ ನಿರ್ದೇಶನ

ಮೋಟಾರು ವಾಹನ ಕಾಯಿದೆ ಸೆಕ್ಷನ್‌ 93ಕ್ಕೆ ತಿದ್ದುಪಡಿ ತಂದು ಅಗ್ರಿಗೇಟರ್‌ ಕಂಪೆನಿಗಳಿಗೆ ಪರವಾನಗಿ ನೀಡುವ ವಿಚಾರವನ್ನು ಸೇರ್ಪಡೆಗೊಳಿಸಲಾಗಿದೆ. ನಿಬಂಧನೆಯ ಪ್ರಕಾರ ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಅನುಸರಿಸಬಹುದು. ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿಗಳು-2020 ಅನ್ನು ಕೇಂದ್ರ ಸರ್ಕಾರವು ಈಗಾಗಲೇ ಜಾರಿ ಮಾಡಿದೆ. ರಾಜ್ಯ ಸರ್ಕಾರವು ಇನ್ನಷ್ಟೇ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂದು ಪೀಠ ಹೇಳಿದೆ. “ನ್ಯಾಯಯುತ ದರ ವಿಧಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದ್ದು, ಮಾರ್ಗಸೂಚಿಗಳನ್ನೂ ಪಾಲಿಸಬೇಕು” ಎಂದು ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com