ಮಕ್ಕಳ ಅಶ್ಲೀಲ ಚಿತ್ರಗಳನ್ನು ಆಕಸ್ಮಿಕವಾಗಿ ಡೌನ್ಲೋಡ್ ಮಾಡುವುದು ಅಪರಾಧವಲ್ಲ: ಕೇರಳ ಹೈಕೋರ್ಟ್

ಉದ್ದೇಶಪೂರ್ವಕವಲ್ಲದೆ ಮಕ್ಕಳ ಅಶ್ಲೀಲ ಚಿತ್ರಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್ಲೋಡ್ ಆಗಿದ್ದರೆ ಅದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಅಪರಾಧವಾಗದು ಎಂದ ಪೀಠ.
Kerala High Court
Kerala High Court
Published on

ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಸ್ತುವಿಷಯಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿದ್ದರೆ ಅದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಬಿ(ಬಿ) ಅಡಿ ಅಪರಾಧವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಸೆಬಿನ್ ಥಾಮಸ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

 ಎಲೆಕ್ಟ್ರಾನಿಕ್ ರೂಪದಲ್ಲಿ ಮಕ್ಕಳನ್ನು ಅಶ್ಲೀಲ ಲೈಂಗಿಕ ಕ್ರಿಯೆಗಳಲ್ಲಿ ಚಿತ್ರಿಸಿರುವ ವಸ್ತುವಿಷಯಗಳ ಪ್ರಕಟಣೆ ಅಥವಾ ಪ್ರಸರಣಕ್ಕೆ ಸೆಕ್ಷನ್ 67 ಬಿ ದಂಡ ವಿಧಿಸುತ್ತದೆ.

ಡೌನ್‌ಲೋಡ್ ಮಾಡುವ  ಅಥವಾ ಅದನ್ನು ರವಾನಿಸುವ, ಪ್ರಚಾರ ಮಾಡುವ, ಪ್ರದರ್ಶಿಸುವ ಅಥವಾ ವಿತರಿಸುವ ಉದ್ದೇಶವಿಲ್ಲದೆ ಮಕ್ಕಳನ್ನು ಒಳಗೊಂಡ ಅಶ್ಲೀಲ ವಸ್ತುವಿಷಯವನ್ನು ಹೊಂದಿದ್ದ ಮಾತ್ರಕ್ಕೆ ಅದು ಸೆಕ್ಷನ್ 67 ಬಿ ಅಡಿ ಅಪರಾಧವಾಗದು ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಹೇಳಿದ್ದಾರೆ.

ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳು ಆರೋಪಿಯ ಸಾಧನದಲ್ಲಿ ಅಶ್ಲೀಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಮಕ್ಕಳ ಬಗೆಗಿನ ಸಂದೇಶಗಳಿರುವುದು ಕಂಡುಬಂದಿರುವುದನ್ನು ಸೂಚಿಸಿವೆ. ಆದರೆ ಅರ್ಜಿದಾರರು ಉದ್ದೇಶಪೂರ್ವಕವಾಗಿ ಡೌನ್‌ಲೋಡ್ ಮಾಡಿದ್ದಾರೆ ಅಥವಾ ಅದನ್ನು ಹುಡುಕಿದ್ದಾರೆ ಇಲ್ಲವೇ ಚಿತ್ರೀಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳಿಲ್ಲ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಅರ್ಜಿದಾರ ಅದನ್ನು ಯಾವುದೇ ಪ್ರಕಾರದಲ್ಲಿ ಪ್ರಸಾರ ಮಾಡಿದ, ಇಲ್ಲವೇ ಪ್ರಚುರ ಪಡಿಸಿದ, ಅಥವಾ ಪ್ರದರ್ಶಿಸಿದ ಇಲ್ಲವೇ ಹಂಚಿದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.

ತ್ರಿಶೂರ್‌ನ ವಿಶೇಷ ತ್ವರಿತ ವಿಚಾರಣಾ ನ್ಯಾಯಾಲಯ ಮೇ 16 ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸೆಬಿನ್ ಥಾಮಸ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ತಿಳಿಸಿತು.

ಪೋಕ್ಸೊ ಕಾಯಿದೆಯ ಸೆಕ್ಷನ್ 15 (2) ರ ಅಡಿಯಲ್ಲಿ, ಮಕ್ಕಳ ಅಶ್ಲೀಲ ವಸ್ತುವಿಷಯಗಳನ್ನು ರವಾನಿಸುವ, ಪ್ರಚಾರ ಮಾಡುವ, ಪ್ರದರ್ಶಿಸುವ ಅಥವಾ ವಿತರಿಸುವ ಉದ್ದೇಶವಿಲ್ಲದಿದ್ದರೆ ಅದನ್ನು ಹೊಂದಿರುವುದು ಅಪರಾಧವಲ್ಲ. ಅದೇ ರೀತಿ, ಐಟಿ ಕಾಯಿದೆಯ ಸೆಕ್ಷನ್ 67 ಬಿ ಅಡಿಯಲ್ಲಿ, ಅಪರಾಧ ಎಂದು ಗುರುತಿಸಲು ಮಕ್ಕಳನ್ನು ಲೈಂಗಿಕವಾಗಿ ಅಶ್ಲೀಲ ಕೃತ್ಯಗಳಲ್ಲಿ ಚಿತ್ರಿಸುವ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು ಅಗತ್ಯವಾಗಿರುತ್ತದೆ ಎಂದು ಅದು ವಿವರಿಸಿತು.

ಈ ಪ್ರಕರಣದಲ್ಲಿ ಐಟಿ ಕಾಯಿದೆಯ  ಸೆಕ್ಷನ್ 67 ಬಿ (ಬಿ) ಅಡಿಯಲ್ಲಿ ಮೇಲ್ನೋಟಕ್ಕೆ ಯಾವುದೇ ಅಪರಾಧ ಎಸಗಿಲ್ಲ. ಏಕೆಂದರೆ ಅಶ್ಲೀಲ ವಸ್ತುವಿಷಯವನ್ನು  ವಿತರಿಸುವ ಅಥವಾ ಪ್ರಚಾರ ಮಾಡುವ ಉದ್ದೇಶದವಿತ್ತು ಎಂದು ಹೇಳುವಂತಹ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹೀಗಾಗಿ, ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ತ್ವರಿತ ಗತಿ ನ್ಯಾಯಾಲಯ ಆದೇಶವನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com