ಖನಿಜ ಸಾಗಣೆಯಿಂದ ಆಗಬಹುದಾದ ಸಂಭವನೀಯ ನಷ್ಟ ತಪ್ಪಿಸುವುದೂ ಅರಣ್ಯ ಸಂರಕ್ಷಣೆ ಭಾಗ: ಹೈಕೋರ್ಟ್
ಅರಣ್ಯ ಪ್ರದೇಶದಲ್ಲಿನ ಮಾರ್ಗದ ಮೂಲಕ ಕಬ್ಬಿಣದ ಅದಿರು ಸಾಗಣೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಲ್ಲದೇ, ಖನಿಜ ಸಾಗಣೆಯಿಂದ ಆಗಬಹುದಾದ ಸಂಭವನೀಯ ಹಾನಿ ಅಥವಾ ನಷ್ಟವನ್ನು ತಪ್ಪಿಸುವುದೂ ಸಹ ಅರಣ್ಯ ಸಂರಕ್ಷಣೆಯ ಭಾಗವಾಗಿದೆ ಎಂದು ಹೇಳಿದೆ.
ಮೆಸರ್ಸ್ ಠಾಕೂರ್ ಇಂಡಸ್ಟ್ರೀಸ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಅರಣ್ಯ ಅನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶ ಎತ್ತಿಹಿಡಿದಿದೆ.
ಅರಣ್ಯ ಪ್ರದೇಶದಲ್ಲಿ ತೆಗೆದ ಅದಿರು ಸಾಗಣೆಗೆ ಮಾತ್ರ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ, ಇದು ಬೇರೆಡೆ ತೆಗೆದಿರುವ ಅದಿರು ಆಗಿರುವುದರಿಂದ ಅರಣ್ಯ ಇಲಾಖೆ ಅನುಮತಿ ಅಗತ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯವು ಕರ್ನಾಟಕ ಅಕ್ರಮ ಗಣಿಗಾರಿಕೆ, ಸಾಗಣೆ, ದಾಸ್ತಾನು ನಿಯಮ 2011ರ ನಿಯಮ 3 ಅನ್ನು ಉಲ್ಲೇಖಿಸಿ ಅನುಮತಿ ಅಗತ್ಯವಾಗಿ ಪಡೆಯಲೇಬೇಕು ಎಂದು ಆದೇಶ ಮಾಡಿದೆ.
“ನಿಯಮದ ಉದ್ದೇಶವು ಬೇರೆಯೇ ಇದೆ. ಇಂತಹ ನಿಯಮಗಳನ್ನು ಅನ್ವಯಿಸುವಾಗ ಅದನ್ನು ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಇಂತಹ ವಿಚಾರಗಳಲ್ಲಿ ಅರಣ್ಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ವ್ಯಾಖ್ಯಾನಗಳನ್ನು ಪರಿಗಣಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ಹಿಂದೆ ನ್ಯಾಯಾಲಯದ ಮತ್ತೊಂದು ಪೀಠ ಅನುಮತಿ ನೀಡಿತ್ತು ಎಂಬ ವಾದವನ್ನು ನ್ಯಾಯಾಲಯ ಒಪ್ಪಿಲ್ಲ. ಆಗ ನಿಯಮದ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿರಲಿಲ್ಲ. ಆದರೆ, ಈಗ ನಿಯಮ ತಿಳಿದಿರುವುದರಿಂದ ಅನುಮತಿ ನೀಡಲಾಗದು. ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ. ಹೀಗಾಗಿ, ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.