ಅಯೋಧ್ಯೆ ತೀರ್ಪಿಗೆ ಒಂದು ವರ್ಷ: ಅಂದಿನಿಂದ ಇಲ್ಲಿಯವರೆಗೆ ನಡೆದ ಘಟನಾವಳಿಗಳ ಸುತ್ತ ಹೊರಳುನೋಟ

ವರ್ಷದ ಹಿಂದೆ, ಹಿಂದೂ ಪಕ್ಷಕಾರರ ಪರವಾಗಿ ತೀರ್ಪು ನೀಡಿದ ಸುಪ್ರೀಂಕೋರ್ಟ್‌ ವಿವಾದಿತ ಸ್ಥಳವನ್ನು ಬಾಲದೈವ ರಾಮ್ ಲಲ್ಲಾಗೆ ವಹಿಸಿತು.
ಅಯೋಧ್ಯೆ ತೀರ್ಪಿಗೆ ಒಂದು ವರ್ಷ: ಅಂದಿನಿಂದ ಇಲ್ಲಿಯವರೆಗೆ ನಡೆದ ಘಟನಾವಳಿಗಳ ಸುತ್ತ ಹೊರಳುನೋಟ

ರಾಮಮಂದಿರ- ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ ಇದೇ ನವೆಂಬರ್‌ 9ಕ್ಕೆ ಸರಿಯಾಗಿ ಒಂದು ವರ್ಷ. ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ವರ್ಷದ ಹಿಂದೆ ಇದೇ ದಿನ ಹಿಂದೂ ಅರ್ಜಿದಾರರ ಪರವಾಗಿ ತೀರ್ಪು ನೀಡಿತು. ಜೊತೆಗೆ ವಿವಾದಿತ ಸ್ಥಳವನ್ನು ಬಾಲದೈವ ರಾಮಲಲ್ಲಾಗೆ ವಹಿಸಿತು. ಮತ್ತೊಂದೆಡೆ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಂ ಪಕ್ಷಗಳಿಗೆ ಐದು ಎಕರೆ ವಿಸ್ತೀರ್ಣದ ಮತ್ತೊಂದು ಜಾಗವನ್ನು ಗುರುತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಅಂದಿನ ನ್ಯಾಯಮೂರ್ತಿಗಳಾದ ಎಸ್ ‌ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ಅವಿಚ್ಛಿನ್ನವಾಗಿ ವಿವಾದಿತ ತಾಣ ತಮ್ಮದೆಂದು ಸಾಬೀತುಪಡಿಸುವಲ್ಲಿ ಮುಸ್ಲಿಮರು ವಿಫಲವಾಗಿದ್ದಾರೆ ಮತ್ತು ಸಂಭಾವ್ಯತೆಯ ಸಮತೋಲನ ಆಧರಿಸಿ ಹಿಂದೂ ಪಕ್ಷಗಳ ಪರವಾಗಿ ತೀರ್ಪು ನೀಡಿತು. ಇದೇ ವೇಳೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಕೃತ್ಯ ಕಾನೂನುಬಾಹಿರ ಎಂದು ನ್ಯಾಯಾಲಯ ಒಪ್ಪಿಕೊಂಡಿತು.

ತೀರ್ಪಿನ ಬಳಿಕ ಅನೇಕ ಚಟುವಟಿಕೆಗಳು ಗರಿಗೆದರಿದವು. ವಿವಾದಿತ ಸ್ಥಳದಲ್ಲಿ ಭೂಮಿ ಪೂಜೆ ಕೂಡ ನಡೆಯಿತು. ಕಳೆದ ವರ್ಷ ಸುಪ್ರೀಂಕೋರ್ಟ್ ತೀರ್ಪು‌ ನೀಡಿದ ನಂತರ ಸಂಭವಿಸಿದ ಘಟನೆಗಳಾವವು ಎಂಬುದರ ವಿವರ ಈ ಕೆಳಗಿನಂತಿದೆ.

ನವೆಂಬರ್-ಡಿಸೆಂಬರ್ 2019: ನವೆಂಬರ್ 9ರ ತೀರ್ಪನ್ನು ಪ್ರಶ್ನಿಸಿ ಕನಿಷ್ಠ 18 ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಯಿತು.

ಡಿಸೆಂಬರ್ 12, 2019: ಎಲ್ಲಾ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ ತನ್ನ ತೀರ್ಪಿನ ಪರಿಶೀಲನೆ ಸಮರ್ಥಿಸುವ ಯಾವುದೇ ಆಧಾರ ಇಲ್ಲ ಎಂದು ತೀರ್ಪು ನೀಡಿತು. ಪರಿಶೀಲನಾ ಅರ್ಜಿಗಳನ್ನು ಚೇಂಬರಿನಲ್ಲಿ ವಿಚಾರಣೆ ನಡೆಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಅದಾಗಲೇ ನಿವೃತ್ತರಾಗಿ ಅವರ ಸ್ಥಾನಕ್ಕೆ ಬಂದವರು ನ್ಯಾ ಎಸ್‌ ಎ ಬೊಬ್ಡೆ. ಇವರ ನೇತೃತ್ವದ ನ್ಯಾಯಪೀಠ ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿತು. ಪೀಠದಲ್ಲಿ ಗೊಗೊಯ್‌ ಅವರ ಸ್ಥಾನವನ್ನು ಸಂಜೀವ್‌ ಖನ್ನಾ ವಹಿಸಿಕೊಂಡಿದ್ದರು. ತೀರ್ಪಿನ ವಿರುದ್ಧದ ಪರಿಹಾರಾತ್ಮಕ (ಕ್ಯುರೇಟೀವ್‌) ಅರ್ಜಿಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ.

ಫೆಬ್ರವರಿ 5, 2020: ಸುಪ್ರೀಂಕೋರ್ಟ್ ತೀರ್ಪಿನಲ್ಲಿರುವ ನಿರ್ದೇಶನಗಳಿಗೆ ಅನುಗುಣವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂದು ಕರೆಯಲಾಗುವ ವಿಶ್ವಸ್ಥ ಮಂಡಳಿಯೊಂದನ್ನು ಸ್ಥಾಪಿಸಲಾಯಿತು. ಪ್ರಕರಣದಲ್ಲಿ ಹಿಂದೂ ಅರ್ಜಿದಾರರ ಪರ ವಾದ ಮಂಡಿಸಿದ್ದ ಮಾಜಿ ಅಟಾರ್ನಿ ಜನರಲ್ ಕೆ ಪರಾಸರನ್ ಅವರ ದೆಹಲಿ ನಿವಾಸದಲ್ಲಿ ಟ್ರಸ್ಟ್‌ನ ನೋಂದಾಯಿತ ಕಚೇರಿ ಸ್ಥಾಪಿಸಲಾಯಿತು.

ಜುಲೈ 20, 2020: ಅಯೋಧ್ಯೆಯಲ್ಲಿರುವ ಕಲಾಕೃತಿಗಳನ್ನು ಸಂರಕ್ಷಿಸಲು ಕೋರಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು ಮತ್ತು ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ಅರ್ಜಿದಾರರಿಗೆ ರೂ 1 ಲಕ್ಷ ದಂಡ ವಿಧಿಸಿತು.

ಜುಲೈ 24, 2020: ಕೋವಿಡ್‌ ಕಾರಣಕ್ಕೆ ಅಯೋಧ್ಯೆಯಲ್ಲಿ ಆಯೋಜಿಸಿದ್ದ ಪ್ರಸ್ತಾವಿತ ರಾಮ್ ಮಂದಿರದ ಅಡಿಗಲ್ಲು ಹಾಕುವ ಕಾರ್ಯಕ್ರಮ ʼಭೂಮಿ ಪೂಜನ್‌ʼ ಗೆ ತಡೆ ನೀಡಬೇಕೆಂದು ಕೋರಿ ಮುಂಬೈ ಮೂಲದ ಹೋರಾಟಗಾರ ಸಾಕೇತ್‌ ಗೋಖಲೆ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿತು. ಸಾಂಕ್ರಾಮಿಕ ರೋಗದ ನಡುವೆ ಸುಮಾರು 300 ಜನರನ್ನು ಆಹ್ವಾನಿಸಲಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಳ್ಳಿಹಾಕಲಾಯಿತು.

ಆಗಸ್ಟ್ 5, 2020: ಹೊಸ ಮಂದಿರ ನಿರ್ಮಾಣ ಆರಂಭಗೊಳ್ಳುವ ದ್ಯೋತಕದಂತೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣ ಕಾರ್ಯಕ್ರಮದ ಶಿಲಾನ್ಯಾಸ ನೆರವೇರಿಸಿದರು.

ಆಗಸ್ಟ್ 14, 2020: ಅಯೋಧ್ಯೆಯಲ್ಲಿ ಹಂಚಿಕೆಯಾದ ಭೂಮಿಯಲ್ಲಿ ಮಸೀದಿ ನಿರ್ಮಾಣದ ಮೇಲ್ವಿಚಾರಣೆ ನಡೆಸುವ ಟ್ರಸ್ಟ್‌ಗೆ ಸುನ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು.

Related Stories

No stories found.
Kannada Bar & Bench
kannada.barandbench.com