ಸಮಾನ ವೇತನ ಪಡೆಯುವ ವಿಚಾರದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮ ಎಂದು ಆದೇಶಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಬುಧವಾರ ಸುಪ್ರೀಂ ಕೋರ್ಟ್ ಬದಿಗೆ ಸರಿಸಿದೆ [ಗುಜರಾತ್ ರಾಜ್ಯ ವರ್ಸಸ್ ಡಾ. ಪಿ ಎ ಭಟ್ ಮತ್ತು ಇತರರು].
ಆಯುರ್ವೇದ ವೈದ್ಯರು ಮತ್ತು ಎಂಬಿಬಿಎಸ್ ವೈದ್ಯರು ಸಮಾನ ವೇತನಕ್ಕೆ ಅರ್ಹರಾಗಲು ಸಮಾನ ಕೆಲಸ ನಿರ್ವಹಿಸುವುದಿಲ್ಲ ಎಂಬ ಅಂಶವನ್ನು ಮರೆಯುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
ಟಿಕ್ಕು ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಂತೆ ಸಮಾನ ವೇತನಕ್ಕೆ ಅರ್ಹರು ಎಂದು ಆದೇಶಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
“ಆಲೋಪತಿ ವೈದ್ಯರು ತುರ್ತು ಸೇವೆ ಹಾಗೂ ಅಪಘಾತ ಆರೈಕೆ (ಟ್ರೌಮಾ ಕೇರ್) ಮಾಡಲು ಅತ್ಯಗತ್ಯ. ಅವರು ನಿರ್ವಹಿಸುವ ಕರ್ತವ್ಯದ ಹಿಂದಿನ ವೈಜ್ಞಾನಿಕ ಸ್ವಭಾವದಿಂದ ಮತ್ತು ವಿಜ್ಞಾನ ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಸುಧಾರಣೆಯಿಂದ ಆಲೋಪತಿ ವೈದ್ಯರು ಅಪಘಾತ ಆರೈಕೆಯನ್ನು ಮಾಡಲು ಸಮರ್ಥರಾಗಿದ್ದು, ಇದನ್ನು ಆಯುರ್ವೇದ ವೈದ್ಯರು ಮಾಡಲಾಗದು. ಸಂಕೀರ್ಣವೂ, ಕ್ಲಿಷ್ಟವೂ ಆದ ಶಸ್ತ್ರಚಿಕಿತ್ಸೆ ನಡೆಸುವ ಸರ್ಜನ್‌ಗಳಿಗೆ ಸಹಾಯ ಮಾಡಲು ಆಯುರ್ವೇದ ವೈದ್ಯರಿಗೆ ಸಾಧ್ಯವಿಲ್ಲ, ಎಂಬಿಬಿಎಸ್ ವೈದ್ಯರು ಸಹಾಯ ಮಾಡಬಲ್ಲರು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ನಗರ/ಪಟ್ಟಣಗಳಲ್ಲಿ ಸಾಮಾನ್ಯ ದಿನಗಳಲ್ಲಿ ಎಂಬಿಬಿಎಸ್ ವೈದ್ಯರು ನೂರಾರು ಹೊರ ರೋಗಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಆದರೆ, ಆಯುರ್ವೇದ ವೈದ್ಯರ ವಿಚಾರದಲ್ಲಿ ಹಾಗಿಲ್ಲ… ಆಯುರ್ವೇದ ವೈದ್ಯರ ಮಹತ್ವ ಮತ್ತು ಪರ್ಯಾಯ/ದೇಶಿಯ ವೈದ್ಯಕೀಯ ವ್ಯವಸ್ಥೆಯನ್ನು ಪ್ರಚುರ ಪಡಿಸುವ ಅಗತ್ಯಗಳನ್ನು ಪರಿಗಣಿಸಿದಾಗ್ಯೂ ಸಹ ಈ ಎರಡೂ ವರ್ಗದ ವೈದ್ಯರು ಸಮಾನ ವೇತನಕ್ಕೆ ಅರ್ಹರಾಗಲು ಸಮಾನ ಕೆಲಸವನ್ನು ಖಂಡಿತವಾಗಿಯೂ ನಿರ್ವಹಿಸುತ್ತಿಲ್ಲ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
“ದೇಶಿಯ ಔಷಧ ಪದ್ಧತಿಯ ಅನ್ವಯ ಕೆಲಸ ಮಾಡುವವರು ಕ್ಲಿಷ್ಟ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಿಲ್ಲ. ಆಯುರ್ವೇದ ಅಧ್ಯಯನವು ಇಂಥ ಶಸ್ತ್ರಚಿಕಿತ್ಸೆ ಮಾಡಲು ಅವರಿಗೆ ಅಧಿಕಾರ ನೀಡುವುದಿಲ್ಲ. ಸಾವಿಗೆ ಕಾರಣ ತಿಳಿದುಕೊಳ್ಳಲು ಅಗತ್ಯವಾದ ಮರಣೋತ್ತರ ಅಥವಾ ಮ್ಯಾಜಿಸ್ಟೀರಿಯಲ್ ತನಿಖೆಗೆ ಅಗತ್ಯವಾದ ಪರೀಕ್ಷೆಯನ್ನು ಸಹ ಆಯುರ್ವೇದ ವೈದ್ಯರು ನಡೆಸುವುದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲು ಆಯುಷ್ ವೈದ್ಯರು ಸಮರ್ಥರು ಎಂದು ಅಧಿಸೂಚನೆ ಹೊರಡಿಸಿರುವುದನ್ನು ನಾವು ಸಾಮಾನ್ಯವಾಗಿ ಗಮನಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.