

ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿದ್ದ (ಎಎಸ್‌ಪಿಪಿ) ಬಿ ಎನ್ ಜಗದೀಶ್ ಅವರನ್ನು ರಾಜ್ಯ ಸರ್ಕಾರಿ ಅಭಿಯೋಜಕರ (ಎಸ್‌ಪಿಪಿ) ಹುದ್ದೆಗೆ ಬಡ್ತಿ ನೀಡಿ, ಕರ್ನಾಟಕ ಸರ್ಕಾರ ಶುಕ್ರವಾರ ನೇಮಕ ಮಾಡಿದೆ.
ರಾಜ್ಯ ಸರ್ಕಾರಿ ಅಭಿಯೋಜಕ I ಆಗಿದ್ದ ಬಿ ಎ ಬೆಳ್ಳಿಯಪ್ಪ ಅವರ ಹುದ್ದೆಗೆ ಜಗದೀಶ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಇದ್ದ ವಿಜಯಕುಮಾರ್ ಮಜಗೆ ಅವರನ್ನು ಸರ್ಕಾರಿ ಅಭಿಯೋಜಕ II ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಮೊಹಮ್ಮದ್ ಆಯುಬ್ ಅಲಿ ಖಾನ್ ಅವರನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ಕಾನೂನು ಅಧಿಕಾರಿಗಳು (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 23ರ ಅಡಿ ನೇಮಕಾತಿ ಮಾಡಲಾಗಿದ್ದು, ನೇಮಕಾತಿಯು ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.