ಬಾಬಾ ಬುಡನ್‌ಗಿರಿ: ಪ್ರತಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಸಚಿವ ಸಂಪುಟ ನಿರ್ಣಯಕ್ಕೆ ಮೇಲ್ಮನವಿದಾರರು ಆಕ್ಷೇಪಣೆ ಸಲ್ಲಿಸಿದ್ದಾರೆ. ಅದಕ್ಕೆ ಸರ್ಕಾರ ಪ್ರತಿ ಆಕ್ಷೇಪಣೆ ಸಲ್ಲಿಸಲಿದ್ದು, ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದ ಸರ್ಕಾರದ ಪರ ವಕೀಲರು.
ಬಾಬಾ ಬುಡನ್‌ಗಿರಿ: ಪ್ರತಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ಮೌಲ್ವಿ ಸೈಯದ್ ಗೌಸ್ ಮೊಹಿಯುದ್ದೀನ್ ಎತ್ತಿರುವ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮೂರು ವಾರಗಳ ಕಾಲಾವಕಾಶ ನೀಡಿದೆ.

ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ತಮ್ಮನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಸಚಿವ ಸಂಪುಟ ನಿರ್ಣಯಕ್ಕೆ ಮೇಲ್ಮನವಿದಾರರು ಆಕ್ಷೇಪಣೆ ಸಲ್ಲಿಸಿದ್ದಾರೆ. ಅದಕ್ಕೆ ಸರ್ಕಾರ ಪ್ರತಿ ಆಕ್ಷೇಪಣೆ ಸಲ್ಲಿಸಲಿದ್ದು, ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠವು ಮೂರು ವಾರದಲ್ಲಿ ಪ್ರತಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠವು ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಸೈಯದ್ ಗೌಸ್ ಮೊಹಿಯುದ್ದೀನ್ ಅವರನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠವು ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆಪ್ಟೆಂಬರ್‌ 28ರಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿಯುದ್ದೀನ್ ಮೇಲ್ಮನವಿ ಸಲ್ಲಿಸಿದ್ದರು.

Also Read
ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ಪೂಜೆ ನೆರವೇರಿಸಲು ಮುಜಾವರ್ ನೇಮಕ: ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

2022ರ ಆಗಸ್ಟ್‌ 22ರ ವಿಚಾರಣೆಯಲ್ಲಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜುಲೈ 1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022ರ ಜುಲೈ 19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತ್ತು.

Related Stories

No stories found.
Kannada Bar & Bench
kannada.barandbench.com