ಪೋಷಕರ ಆದಾಯ ನಿಗದಿತ ಮಿತಿ ದಾಟಿದರೆ ಹಿಂದುಳಿದ ವರ್ಗದಡಿ ಮೀಸಲಾತಿ ಪಡೆಯಲು ಅನರ್ಹ: ಹೈಕೋರ್ಟ್‌

ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದರೆ, ಆದಾಯ ತೆರಿಗೆ ಪಾವತಿದಾರನಾದರೆ ಆಗ ಕೆನೆ ಪದರ ನಿಯಮ ಅನ್ವಯ ಆಗಲಿದ್ದು, ಅಭ್ಯರ್ಥಿಯು ಪ್ರವರ್ಗ 2-ಎ ಅಡಿ ಮೀಸಲಾತಿಯನ್ನು ಪಡೆಯಲು ಅವಕಾಶವಿಲ್ಲ ಎಂದ ನ್ಯಾಯಾಲಯ.
CJ Vibhu Bhakru and Justice̤ CM Poonacha
CJ Vibhu Bhakru and Justice̤ CM Poonacha
Published on

ಪ್ರವರ್ಗ 2ಎ (ಹಿಂದುಳಿದ ವರ್ಗ) ಅಡಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿ ಕೆನೆ ಪದರಕ್ಕೆ ಸೇರುತ್ತಾರೆ. ಆದ್ದರಿಂದ, ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ತೀರ್ಪು ನೀಡಿದೆ.

ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಪ್ರವರ್ಗ 2ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದ ರಾಘವೇಂದ್ರ ಚಂದ್ರಣ್ಣನವರ್ ಎಂಬುವರಿಗೆ ಮೀಸಲಾತಿಗೆ ಅನ್ವಯಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ‌ನಿಂದನೆ ಆರೋಪದಡಿ ಕ್ರಮ ಜರುಗಿಸಲು ಕೋರಿ ರಾಘವೇಂದ್ರ ಅವರು ನ್ಯಾಯಾಂಗ ‌ನಿಂದನೆ ಅರ್ಜಿ ಸಲ್ಲಿಸಿದ್ದರು.

ಮೇಲ್ಮನವಿ ಹಾಗೂ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಭ್ಯರ್ಥಿಯ ಪೋಷಕರ ವೇತನ ಸೇರಿ ಎಲ್ಲ ಮೂಲದ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದರೆ, ಆದಾಯ ತೆರಿಗೆ ಪಾವತಿದಾರನಾದರೆ ಆಗ ಕೆನೆ ಪದರ ನಿಯಮ ಅನ್ವಯ ಆಗಲಿದ್ದು, ಅಭ್ಯರ್ಥಿಯು ಪ್ರವರ್ಗ 2ಎ ಅಡಿ ಮೀಸಲಾತಿ ಪಡೆಯಲು ಅವಕಾಶವಿಲ್ಲ ಎಂದು ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿರುವ ವಿಭಾಗೀಯ ಪೀಠ, ಅಭ್ಯರ್ಥಿ ರಾಘವೇಂದ್ರ ಸಲ್ಲಿಸಿದ್ದ‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಧಾರವಾಡದ ರಾಘವೇಂದ್ರ ಚಂದ್ರಣ್ಣನವರ್ ಪ್ರವರ್ಗ- 2ಎ (ಕುರುಬ) ಅಡಿ ಆಯ್ಕೆಯಾಗಿದ್ದರು. ಅದರಂತೆ, ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ,‌ ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ- 2ಎಗೆ ನಿಗದಿ ಪಡಿಸಿರುವ ವಾರ್ಷಿಕ ಆದಾಯ ಮಿತಿಯಾದ 8 ಲಕ್ಷ ರೂ. ಮೀರುತ್ತಿರುವುದರಿಂದ ಅವರು ಹಿಂದುಳಿದ ವರ್ಗಗಳಡಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದಿದ್ದ ಸಮಿತಿ, 2024ರ ಮಾರ್ಚ್ 6ರಂದು ರಾಘವೇಂದ್ರ ಅರ್ಜಿ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ರಾಘವೇಂದ್ರ ಚಂದ್ರಣ್ಣನವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು 2024ರ ಅಕ್ಟೋಬರ್ 28ರಂದು ಮಾನ್ಯ ಮಾಡಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕುರುಬ ಜಾತಿಯ ಪ್ರವರ್ಗ 2ಎ ಗೆ ಅನ್ವಯಿಸುವ ಮೀಸಲಾತಿಗೆ ರಾಘವೇಂದ್ರ ಅವರು ಅರ್ಹರೆಂದು ಪ್ರಮಾಣೀಕರಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ಎರಡು ವಾರಗಳ ಒಳಗೆ ವಿತರಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ರಾಘವೇಂದ್ರ ಸಹ ಹೈಕೋರ್ಟ್ ಆದೇಶವನ್ನು ಸರ್ಕಾರ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Attachment
PDF
Appelate Authority Vs Raghavendra Chandrananavar
Preview
Kannada Bar & Bench
kannada.barandbench.com