[ಬ್ಯಾಡ್ ಬಾಯ್ ಬಿಲಿಯನೇರ್ಸ್‌] ನಿಮ್ಮ ನಡತೆ ನಿಮ್ಮ ಇಚ್ಛೆಗೆ ಅನುಗುಣವಾಗಿದೆಯೇ?: ಚೋಕ್ಸಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ನೆಟ್‌ಫ್ಲಿಕ್ಸ್‌ ನ ಬ್ಯಾಡ್ ಬಾಯ್ ಬಿಲೇನಿಯರ್ಸ್ ಪೂರ್ವಪ್ರದರ್ಶನ ರಿಟ್ ಅರ್ಜಿ ವಜಾಗೊಳಿಸಿದ್ದ ಆದೇಶ ಪ್ರಶ್ನಿಸಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ನಡೆಸಿತು.
Mehul Choksi
Mehul Choksi

ಭಾರತೀಯ ಸಂವಿಧಾನದ ಪರಿಚ್ಛೇದ 226 ಅನ್ನು ಪ್ರಸ್ತಾಪಿಸುವ ವ್ಯಕ್ತಿಯ ನಡತೆಯನ್ನು ಗಮನಿಸುವುದು ಅದಕ್ಕೆ ಸಂಬಂಧಿಸಿದ ವಿಚಾರವೇ ಆಗಿರುತ್ತದೆ ಎಂದಿರುವ ದೆಹಲಿ ಹೈಕೋರ್ಟ್‌, ನೆಟ್‌ಫ್ಲಿಕ್ಸ್ ಕಾರ್ಯಕ್ರಮವನ್ನು ಪೂರ್ವ ಪ್ರದರ್ಶನ ಮಾಡುವಂತೆ ಕೋರಿರುವ ಮೆಹುಲ್ ಚೋಕ್ಸಿ ಅವರ ಬೇಡಿಕೆಯನ್ನು ಸಂಬಂಧಪಟ್ಟ ನ್ಯಾಯಿಕ ವ್ಯಾಪ್ತಿ ಇರುವ ನ್ಯಾಯಾಲಯವು ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ. (ಮೆಹುಲ್ ಚೋಕ್ಸಿ ವರ್ಸಸ್ ಭಾರತ ಸರ್ಕಾರ).

ನೆಟ್‌ಫ್ಲಿಕ್ಸ್‌ನ ಸಾಕ್ಷ್ಯ ಚಿತ್ರ ಸರಣಿಯ “ಬ್ಯಾಡ್ ಬಾಯ್ ಬಿಲೇನಿಯರ್ಸ್” ಪೂರ್ವ ಪ್ರದರ್ಶನ ಅರ್ಜಿ ವಜಾಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾ. ಪ್ರತೀಕ್ ಜಲನ್ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸಿತು. ಸೆಪ್ಟೆಂಬರ್ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.

Chief Justice DN Patel and Prateek Jalan
Chief Justice DN Patel and Prateek Jalan

ಸಿವಿಲ್ ನ್ಯಾಯಾಲಯದಲ್ಲಿ ಸದರಿ ರಿಟ್ ಅರ್ಜಿಗೆ ಪರ್ಯಾಯ ಪರಿಹಾರ ಇಲ್ಲ ಎಂಬ ನೆಲೆಯಲ್ಲಿ ಏಕಸದಸ್ಯ ಪೀಠವು ಚೋಕ್ಸಿ ಅವರ ಮನವಿಯನ್ನು ತಿರಸ್ಕರಿಸಿದೆ.

ಚೋಕ್ಸಿ ಪ್ರತಿನಿಧಿಸುತ್ತಿರುವ ವಕೀಲ ವಿಜಯ್ ಅಗರ್ವಾಲ್ ಅವರು ರಿಟ್ ಅರ್ಜಿಯ ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ನಿರ್ಧರಿಸುವಂತೆ ಸೂಚಿಸಿ ಅರ್ಜಿಯನ್ನು ಏಕಸದಸ್ಯ ಪೀಠಕ್ಕೆ ವಾಪಸ್ ಕಳುಹಿಸಬೇಕು ಎಂದು ಮನವಿ ಮಾಡಿದರು. “ಸಾಂವಿಧಾನಿಕ ನ್ಯಾಯಾಲಯದ ಕದ ತಟ್ಟಿದಾಗ ಅದು ನನಗೆ ಹೊರಹೋಗಲು ತಿಳಿಸುವುದಿಲ್ಲ. ಈ ನ್ಯಾಯಾಲಯಕ್ಕೆ ಜನ್ಮ ನೀಡಿದ ಕಾನೂನಿನ ಪುಸ್ತಕದಲ್ಲೇ ನನ್ನ ಹಕ್ಕನ್ನೂ ಖಾತರಿಗೊಳಿಸಲಾಗಿದೆ” ಎಂದು ವಾದಿಸಿದರು.

ಈ ವೇಳೆ ನ್ಯಾಯಾಲಯವು, ರಿಟ್ ವ್ಯಾಪ್ತಿಯನ್ನು ಪ್ರಶ್ನಿಸುವ ಪಕ್ಷಕಾರರ ನಡತೆ ಇಲ್ಲಿ ಬಹುಮುಖ್ಯ ಅಂಶವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿತು. ಮುಂದುವರೆದು ಪೀಠವು ಹೀಗೆ ಹೇಳಿತು:

ಇಂದು, ವ್ಯಕ್ತಿಯೊಬ್ಬರು ನ್ಯಾಯಸಮ್ಮತ ವಿಚಾರಣೆ ಮತ್ತು ತನಿಖೆಯನ್ನು ಬಯಸುತ್ತಿದ್ದಾರೆ… ಅವರ ನಡತೆಯು ಅವರ ಈ ಇಚ್ಛೆಗೆ ಅನುಗುಣವಾಗಿದೆಯೇ?
ದೆಹಲಿ ಹೈಕೋರ್ಟ್

ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆಯಲ್ಲಿ ಭಾಗವಹಿಸುವುದಾಗಿ ಚೋಕ್ಸಿ ಹೇಳಿದ್ದಾರೆ ಎಂದು ಅವರ ವಕೀಲ ಅಗರ್ವಾಲ್ ಹೇಳುತ್ತಿದ್ದಂತೆ, “ನೀವು ಯಾವಾಗ ದೇಶ ತೊರೆದಿರಿ? ನಿಮ್ಮ ಪೌರತ್ವವನ್ನು ಯಾವಾಗ ತ್ಯಜಿಸಿದಿರಿ?” ಎಂದು ಪೀಠವು ಪ್ರಶ್ನಿಸಿತು.

Also Read
ಯುಪಿಎಸ್‌ಸಿ ಜಿಹಾದ್ ವಿವಾದ: ಟಿವಿ ಚಾನೆಲ್‌ಗಳಿ‌ಗೂ ಮುನ್ನ ಡಿಜಿಟಲ್ ಮಾಧ್ಯಮ ನಿಯಂತ್ರಣ ಅನಿವಾರ್ಯ ಎಂದ ಕೇಂದ್ರ ಸರ್ಕಾರ

ನೆಟ್‌ಫ್ಲಿಕ್ಸ್ ಪ್ರತಿನಿಧಿಸಿದ್ದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು “ರಿಟ್ ಎಂಬುದು ಅತ್ಯಂತ ವಿಶೇಷವಾದ ಪರಿಹಾರ. ಚೋಕ್ಸಿಯ ಅನುಪಸ್ಥಿತಿಯಲ್ಲಿ ಅದನ್ನು ನಿರ್ಧರಿಸಲಾಗದು. ಕಾರ್ಯಕ್ರಮವನ್ನು ಸಂದರ್ಶನ, ಮಾಹಿತಿ ತುಣುಕುಗಳು, ಪುಸ್ತಕ ಇತ್ಯಾದಿಗಳ ಆಧಾರದಲ್ಲಿ ರೂಪಿಸಲಾಗಿದೆ. ಮೂಲದ ಮಾಹಿತಿ ಪಟ್ಟಿ ಇದ್ದು, ಅವರ ಸಂದರ್ಶನವನ್ನೂ ಪಡೆಯಲಾಗಿದೆ…” ಎಂದು ವಾದಿಸಿದರು.

ಹಿರಿಯ ವಕೀಲ ದಯನ್ ಕೃಷ್ಣನ್ ಅವರೂ ಕೂಡ ನೆಟ್‌ ಫ್ಲಿಕ್ಸ್ ಪರವಾಗಿ ಹಾಜರಿದ್ದರು. ಅಗರ್ವಾಲ್ ಅವರ ಜೊತೆ ನಮಿತ್ ಜೋಶಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

Kannada Bar & Bench
kannada.barandbench.com