ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ನಗರದ ಪ್ರತಿಷ್ಠಿತ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಬಾಗ್ಮನೆ ಟೆಕ್‌ಪಾರ್ಕ್) ದೂರು ಆಧರಿಸಿ ಲೋಕಾಯುಕ್ತರು ನಡೆಸಿದ ವಿಚಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಮುಂದೂಡಿದೆ.
ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳು ಸರಿಪಡಿಸುವಂತೆ ಅರ್ಜಿದಾರ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ 28ಕ್ಕೆ ಮುಂದೂಡಿತು.
ಬಾಗ್ಮನೆ ಟೆಕ್‌ಪಾರ್ಕ್ ಕಂಪೆನಿಯು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಗುರುತು ಮಾಡಿತ್ತು. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದ ಬಾಗ್ಮನೆ ಟೆಕ್‌ಪಾರ್ಕ್, ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್ ಜಾರಿ ಮಾಡಿಲ್ಲ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್ ಎಸ್ಟೇಟ್ ಕಂಪೆನಿಗೆ ಬಿಬಿಎಂಪಿ ಸಾಥ್ ನೀಡಿದೆ. ಬಿಬಿಎಂಪಿಯು ತಾರತಮ್ಯದಿಂದ ರಾಜಕಾಲುವೆ ತೆರವು ಮಾಡಿದರೆ ಬಾಗ್ಮನೆ ಮತ್ತು ಸಮೀಪದ ಕಂಪೆನಿಗಳಿಗೆ ಪ್ರವಾಹದ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿತ್ತು.
ಇದನ್ನು ಪರಿಗಣಿಸಿದ್ದ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ಅವರು “ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಯಲು ಸ್ವಲ್ಪ ಕಾಲಾವಕಾಶಬೇಕಿದೆ. ಒತ್ತುವರಿ ಕಾರ್ಯಾಚರಣೆಯನ್ನು ಮೂರು ವಾರ ಮುಂದೂಡಲಾಗಿದೆ” ಎಂದು ತಿಳಿಸಿ ಸೆಪ್ಟೆಂಬರ್ 12ರಂದು ಆದೇಶ ಮಾಡಿದ್ದರು. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬಾಗ್ಮನೆ ಟೆಕ್‌ಪಾರ್ಕ್ ಬಳಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಲೋಕಾಯುಕ್ತರ ಈ ಆದೇಶವನ್ನು ಪ್ರಶ್ನಿಸಲಾಗಿದೆ.