ಏಷ್ಯನ್ ಒಲಿಂಪಿಕ್ ಮತ್ತು ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ನೀಡಿದ ಆಹ್ವಾನವನ್ನು ಪ್ರಶ್ನಿಸಿ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಸತ್ಯವರ್ತ್ ಕಡಿಯಾನ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ [ಬಜರಂಗ್ ಪುನಿಯಾ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯನ್ನು ಮುಂದಿನ ವಾರ ಹೈಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ವಿಶೇಷವೆಂದರೆ, ಈ ಕುಸ್ತಿಪಟುಗಳು ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಸಿಂಗ್ ಅಧಿಕಾರಾವಧಿಯ ನಂತರ, ಸಂಜಯ್ ಸಿಂಗ್ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿದ್ದರು. ಅವರನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತರೆಂದು ಪರಿಗಣಿಸಲಾಗಿದೆ.
ಡಬ್ಲ್ಯುಎಫ್ಐ ಅನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ, ಹಾಗಾಗಿ ಟ್ರಯಲ್ಸ್‌ಗೆ ಕುಸ್ತಿಪಟುಗಳನ್ನು ಆಹ್ವಾನಿಸುವ ಅಧಿಕಾರ ಅದಕ್ಕಿಲ್ಲ ಎಂದು ಪುನಿಯಾ ಮತ್ತು ಇತರರು ವಾದಿಸಿದ್ದಾರೆ.
ಡಬ್ಲ್ಯುಎಫ್ಐನ ವ್ಯವಹಾರಗಳನ್ನು ನಿರ್ವಹಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ತಾತ್ಕಾಲಿಕ ಸಮಿತಿ ರಚಿಸಿದೆ ಮತ್ತು ಡಬ್ಲ್ಯುಎಫ್ಐಗೆ ಅದರ ಕಾನೂನುಬಾಹಿರ ಸ್ಥಾನಮಾನದ ಬಗ್ಗೆ ತಿಳಿದಿದ್ದರೂ, ಆಯ್ಕೆ ಟ್ರಯಲ್ಸ್‌ಗೆ ನೋಟಿಸ್ ನೀಡಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
"ಪ್ರತಿವಾದಿ ಸಂಖ್ಯೆ 2 (ಡಬ್ಲ್ಯುಎಫ್ಐ) ಅಂತಹ ಕಾರ್ಯಕ್ರಮಗಳನ್ನು ನಡೆಸದಂತೆ ಅಥವಾ ಅಂತಹ ಯಾವುದೇ ಸುತ್ತೋಲೆಗಳನ್ನು ಹೊರಡಿಸದಂತೆ ನಿರ್ದಿಷ್ಟವಾಗಿ ನಿರ್ಬಂಧಿಸದಿದ್ದರೆ ಅದು ಕುಸ್ತಿ ಕ್ರೀಡಾಪಟುಗಳನ್ನು ದಾರಿತಪ್ಪಿಸುವುದು, ತಿರುಚುವುದು, ಪ್ರಭಾವ ಬೀರುವುದು, ಬೆದರಿಕೆ ಹಾಕುವುದು ಮತ್ತು ಅನಗತ್ಯ ಪ್ರತಿಕೂಲತೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತದೆ" ಎಂದು ಮನವಿಯಲ್ಲಿ ವಾದಿಸಲಾಗಿದೆ.
ತಾತ್ಕಾಲಿಕ ಸಮಿತಿಯು ಟ್ರಯಲ್ಸ್‌ಗೆ ದಿನಾಂಕ ನೀಡಿದ್ದು, ಅದು ಡಬ್ಲ್ಯುಎಫ್ಐ ನೀಡಿರುವ ದಿನಾಂಕದಂದೇ ಬರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. "ಎರಡು ಪರ್ಯಾಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳ ನಡುವೆ ಇದು ಗೊಂದಲ ಮತ್ತು ಅಸಮಾನತೆಗೆ ಕಾರಣವಾಗುತ್ತದೆ, ಇದು ಅಂತಾರಾಷ್ಟ್ರೀಯ ಆಡಳಿತ ಮಂಡಳಿಗಳಿಗೆ ಬಹು ಅರ್ಹತಾ ಪ್ರವೇಶಗಳಿಗೆ ಕಾರಣವಾಗುತ್ತದೆ. ಡೋಪಿಂಗ್ ವಿರೋಧಿ ನಿಯಂತ್ರಕ ಪರೀಕ್ಷೆಗಳು ಸೇರಿದಂತೆ ಭಾಗವಹಿಸುವ ಕ್ರೀಡಾಪಟುವಾಗಿ ಅರ್ಜಿದಾರರ ಅರ್ಹತೆ ಮತ್ತು ವಿಶ್ವಾಸಾರ್ಹತೆಯನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಪ್ರತಿವಾದಿ 2 (ಡಬ್ಲ್ಯುಎಫ್ಐ) ಇತರ ಸಂಸ್ಥೆಗಳೊಂದಿಗೆ ಕೈಜೋಡಿಸುವ ದುರುದ್ದೇಶಪೂರಿತ ಪ್ರಯತ್ನಗಳಿಂದ ಉಂಟಾಗುವ ಸಮಂಜಸವಾದ ಆತಂಕಗಳಿವೆ " ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಡಬ್ಲ್ಯುಎಫ್ಐ ಅಕ್ರಮಗಳು ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ಪದಾಧಿಕಾರಿಗಳ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ತಮ್ಮನ್ನು ಮತ್ತು ಇತರ ಹಲವಾರು ಕ್ರೀಡಾಪಟುಗಳನ್ನು ಡಬ್ಲ್ಯುಎಫ್ಐ ಗುರಿಯಾಗಿಸಿಕೊಂಡಿದೆ ಮತ್ತು ಕಿರುಕುಳ ನೀಡಿದೆ ಎಂದು ಅರ್ಜಿದಾರ ಕುಸ್ತಿಪಟುಗಳು ವಾದಿಸಿದ್ದಾರೆ.
"ಎರಡನೇ ಪ್ರತಿವಾದಿಯ ಪ್ರಭಾವ ಮತ್ತು ಪಕ್ಷಪಾತದ ರಾಜಕೀಯ ಪ್ರಭಾವವು ಎಷ್ಟು ಸ್ಪಷ್ಟವಾಗಿದೆಯೆಂದರೆ, ಅದರ ಪದಾಧಿಕಾರಿಗಳ ವಿರುದ್ಧದ ಲೈಂಗಿಕ ಕಿರುಕುಳ ವಿಷಯಗಳ ಬಗ್ಗೆ ಔಪಚಾರಿಕ ದೂರಿನ ತನಿಖೆಯು ಸಹ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮತ್ತು ನಿರ್ದೇಶನಗಳ ಮೂಲಕ ಮಾತ್ರವೇ ಸಾಧ್ಯವಾಯಿತು. ಎರಡನೇ ಪ್ರತಿವಾದಿಯ ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಅರ್ಜಿದಾರರು ಸೇರಿದಂತೆ ಇತರ ಅನೇಕ ಕ್ರೀಡಾಪಟುಗಳನ್ನು ನಿರ್ಲಕ್ಷಿಸುವುದು, ಹೆದರಿಸುವುದು, ಕಿರುಕುಳಕ್ಕೀಡುಮಾಡುವುದು, ಬೆದರಿಕೆ ಹಾಕುವುದನ್ನು ಮಾಡಲಾಗಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.