
ಬಹುಭಾಷಾ ನಟ ಕಮಲ್ ಹಾಸನ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರ ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ವ್ಯಕ್ತವಾಗಿರುವ ವಿರೋಧದ ಹಿನ್ನೆಲೆಯಲ್ಲಿ ಅವರ ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ʼಥಗ್ ಲೈಫ್ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
'ಥಗ್ ಲೈಫ್' ಚಿತ್ರದ ಪ್ರಚಾರ ಸಮಾರಂಭವೊಂದರಲ್ಲಿ ಕನ್ನಡ ಮತ್ತು ತಮಿಳಿನ ನಡುವಿನ ಬಾಂಧವ್ಯವನ್ನು ವಿವರಿಸುತ್ತಾ ನಟ ಕಮಲ್ ಹಾಸನ್ ಅವರು, 'ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದ್ದು' ಎಂದು ನೀಡಿದ್ದ ಹೇಳಿಕೆಗೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಜೂನ್ 5ಕ್ಕೆ ಬಿಡುಗಡೆ ಆಗಲಿರುವ ʼಥಗ್ ಲೈಫ್ʼ ಸಿನಿಮಾ ಪ್ರದರ್ಶನವನ್ನು ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಬಂಧಿಸಬೇಕು. ಸಿನಿಮಾ ಪ್ರದರ್ಶನ, ಥಿಯೇಟರ್, ಸಿನಿಮಾ ನೋಡಲು ಹೋಗುವ ಜನರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಹಂಚಿಕೆದಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಮನವಿ ಮಾಡಿದೆ.
ಸಿಬಿಎಫ್‌ಸಿಯು 19.05.2025, 29.05.2025ರಂದು ಸಿನಿಮಾ ಬಿಡುಗಡೆಗೆ ಸರ್ಟಿಫಿಕೇಟ್ ನೀಡಿದ್ದು, ಕರ್ನಾಟಕ ರಾಜ್ಯ ವಾಣಿಜ್ಯ ಮಂಡಳಿಗೆ ಥಗ್ ಲೈಫ್ ನಿಷೇಧಿಸಲು ಯಾವುದೇ ಹಕ್ಕು ಇಲ್ಲ. ಸಿನಿಮಾ ಬಿಡುಗಡೆಗೆ ನಿಷೇಧ ಹೇರುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಲಿದ್ದು, ಸಿನಿಮಾ ಪ್ರದರ್ಶಿಸುವ ಮತ್ತು ಅದನ್ನು ವೀಕ್ಷಿಸುವ ಜನರ ಹಕ್ಕಿಗೆ ಹಾನಿಯಾಗುತ್ತದೆ.