ರಾಜಕೀಯ ಪಕ್ಷಗಳಿಂದ ಉಚಿತ ಗ್ಯಾರಂಟಿಗಳಿಗೆ ನಿರ್ಬಂಧ: ನಿವೃತ್ತ ಯೋಧರಿಂದ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೇಂದ್ರ ಚುನಾವಣಾ ಆಯೋಗ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಮತ್ತು ಎನ್‌ಸಿಪಿ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
High Court of Karnataka
High Court of Karnataka

ಚುನಾವಣೆಯ ವೇಳೆ ರಾಜಕೀಯ ಪಕ್ಷಗಳ ಮತದಾರರಿಗೆ ನೀಡುತ್ತಿರುವ ಉಚಿತ ಗ್ಯಾರಂಟಿ ಆಮಿಷಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ನಿವೃತ್ತ ಸೈನಿಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. ಬ್ರಿಗೇಡಿಯರ್ ರವಿ, ಮುನಿಸ್ವಾಮಿ ಮತ್ತಿತರರು ಬುಧವಾರ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೇಂದ್ರ ಚುನಾವಣಾ ಆಯೋಗ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಮತ್ತು ಎನ್‌ಸಿಪಿ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶತಾಯ ಗತಾಯ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿವೆ. ಹೀಗಾಗಿ, ಅಂತಹ ಅಭ್ಯರ್ಥಿಗಳು ಮತ್ತು ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಜನರ ತೆರಿಗೆ ಹಣದಲ್ಲಿ ಅಧಿಕಾರ ಲಾಲಸೆಗೆ ಮತದಾರರಿಗೆ ಆಮಿಷವೊಡ್ಡಿ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೇಶದ ಅಭಿವೃದ್ಧಿಗೆ ಬೊಕ್ಕಸದ ಹಣ ಬಳಸುವ ಬದಲು ಆಮಿಷಕ್ಕೆ ಬಳಕೆ ಮಾಡಲಾಗುತ್ತಿದೆ. ಮತದಾರರಿಗೆ ಪ್ರಲೋಭನೆ ಒಡ್ಡಿ ಮತ ಕೇಳುವುದು ಸಂವಿಧಾನಬಾಹಿರ ಹಾಗೂ ಜನಪ್ರತಿನಿಧಿಗಳ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗಸೂಚಿ ರೂಪಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com