ಹೆದ್ದಾರಿ ಸಮೀಪ ಮದ್ಯದಂಗಡಿ ನಿಷೇಧ ಸಡಿಲಿಕೆ ಹಿನ್ನೆಲೆ: ಶಾಲೆ ಬಳಿಯ ವೈನ್ ಶಾಪ್ ಮುಚ್ಚುವ ಆದೇಶ ಹಿಂಪಡೆದ ಸುಪ್ರೀಂ

ಶಿಕ್ಷಣ ಸಂಸ್ಥೆಯಿಂದ 150 ಮೀಟರ್ ದೂರದ ವೈನ್ ಶಾಪ್ ಮುಚ್ಚುವ ಆದೇಶವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದ್ದು ಹೊಸದಾಗಿ ನಿರ್ಧರಿಸುವಂತೆ ಸೂಚಿಸಿ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ಗೆ ಮರಳಿಸಿದೆ.
ಮದ್ಯದಂಗಡಿ ಎದುರು ಸಾಲುಗಟ್ಟಿ ನಿಂತ ಜನ.
ಮದ್ಯದಂಗಡಿ ಎದುರು ಸಾಲುಗಟ್ಟಿ ನಿಂತ ಜನ.ಪ್ರಾತಿನಿಧಿಕ ಚಿತ್ರ

ಹೆದ್ದಾರಿ ಬಳಿ ಮದ್ಯದಂಗಡಿ ನಿಷೇಧಿಸಿದ್ದ 2016ರ ತೀರ್ಪಿನಲ್ಲಿನ ನಿರ್ಬಂಧಗಳನ್ನು ಕೆಲ ಪ್ರಕರಣಗಳಲ್ಲಿ ಸಡಿಲಿಸಲಾಗಿದೆ ಎಂದು ಗಮನಿಸಿರುವ ಸುಪ್ರೀಂ ಕೋರ್ಟ್‌ ಪಾಂಡಿಚೇರಿಯ ಶಿಕ್ಷಣ ಸಂಸ್ಥೆಯೊಂದರ 150 ಮೀಟರ್ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ವೈನ್ ಶಾಪ್ ಮುಚ್ಚುವಂತೆ ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆದಿದೆ [ಅಲಂಕಾರ್‌ ವೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಗ್ರಾಹಕರ ರಕ್ಷಣಾ ವೇದಿಕೆ ಇನ್ನಿತರರ ನಡುವಣ ಪ್ರಕರಣ].

ತಮಿಳುನಾಡು ಸರ್ಕಾರ ಮತ್ತು ಕೆ.ಬಾಲು ನಡುವಣ (2016) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಹಿಂದಿನ ತೀರ್ಪನ್ನು ಪಾಂಡಿಚೇರಿ ವೈನ್ ಶಾಪ್ ಮುಚ್ಚುವಂತೆ ಮಾರ್ಚ್ 2023ರಲ್ಲಿ ನೀಡಲಾಗಿದ್ದ ಆದೇಶ ಅವಲಂಬಿಸಿತ್ತು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಆದರೆ, ಕೆ ಬಾಲು ತೀರ್ಪಿನಲ್ಲಿ ವಿಧಿಸಲಾದ ಮದ್ಯದಂಗಡಿಗಳ ಮೇಲಿನ ನಿರ್ಬಂಧಗಳನ್ನು 2017 ಮತ್ತು 2018ರಲ್ಲಿ ಹೊರಡಿಸಿದ ಆದೇಶಗಳ ಮೂಲಕ ಮಾರ್ಪಡಿಸಲಾಗಿದೆ (ಮತ್ತು ಕೆಲವು ಸನ್ನಿವೇಶಗಳಲ್ಲಿ ಸಡಿಲಿಸಲಾಗಿದೆ) ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.

ಮಾರ್ಚ್ 20, 2023ರಂದು ಪಾಂಡಿಚೇರಿ ವೈನ್ ಶಾಪ್ ಮುಚ್ಚಲು ಆದೇಶಿಸಿದಾಗ ಈ ನಂತರ ಹೊರಡಿಸಲಾದ ಆದೇಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ ಎಂದ ನ್ಯಾಯಾಲಯ ಮಾರ್ಚ್ 2023ರಂದು ತಾನು ನೀಡಿದ್ದ ಆದೇಶ ಹಿಂಪಡೆಯಿತು. ಜೊತೆಗೆ ಹೊಸದಾಗಿ ನಿರ್ಧರಿಸುವಂತೆ ಸೂಚಿಸಿ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ಗೆ ಮರಳಿಸಿತು.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ವೈನ್ ಶಾಪ್ ಮುಚ್ಚುವಂತೆ ಮಾರ್ಚ್ 2023ರಲ್ಲಿ ನೀಡಲಾಗಿದ್ದ ಆದೇಶದಿಂದ ತೊಂದರೆಗೀಡಾದ ಪಾಂಡಿಚೇರಿ ಸರ್ಕಾರ ಮತ್ತು ಮದ್ಯ ಪರವಾನಗಿದಾರರು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಶಿಕ್ಷಣ ಸಂಸ್ಥೆಗಳು ಅಥವಾ ದೇವಾಲಯ ಅಥವಾ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವೈನ್ ಶಾಪ್ ಸ್ಥಾಪಿಸುವಂತಿಲ್ಲ ಎಂದು 2023ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪಿನ ನಿಖರತೆಯನ್ನು ಪಾಂಡಿಚೇರಿ ಸರ್ಕಾರ ಪ್ರಶ್ನಿಸಿತ್ತು. ಇಂಥದ್ದೇ ಪ್ರಕರಣದ ಬಗ್ಗೆ ಸಿವಿಲ್‌ ಮೇಲ್ಮನವಿಯೊಂದಿಗೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ನಿರ್ಧರಿಸಲಾಗಿದೆ.

ಇತ್ತೀಚಿನ ಕಾನೂನು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ನಿರ್ಧರಿಸುವಂತೆ ಸೂಚಿಸಿ ಇದೀಗ ಪ್ರಕರಣವನ್ನು ಹೈಕೋರ್ಟ್‌ಗೆ ಮರಳಿಸಲಾಗಿದೆ.

ಸುಪ್ರೀಂ ಕೋರ್ಟ್ ಡಿಸೆಂಬರ್ 2016ರಲ್ಲಿ ಕೆ ಬಾಲು ಪ್ರಕರಣದ ತೀರ್ಪು ನೀಡುವಾಗ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಮದ್ಯದಂಗಡಿಗಳನ್ನು ಸ್ಥಾಪಿಸಲು ಅನುಮತಿಸಬಹುದಾದ ಪ್ರದೇಶಗಳ ಬಗ್ಗೆ ವಿವಿಧ ನಿರ್ದೇಶನಗಳನ್ನು ನೀಡಿತ್ತು. ಮಾರ್ಚ್ 2017ರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಿಷೇಧಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್‌ ಖೇಹರ್, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್  ಹಾಗೂ ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠ ಸ್ವಲ್ಪಮಟ್ಟಿನ ಮಾರ್ಪಾಡುಗಳನ್ನು ಮಾಡಿತ್ತು.

ಆದರೆ, ಮಾರ್ಚ್ 20, 2023 ರಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಪಾಂಡಿಚೇರಿಯ ವೈನ್ ಶಾಪ್, ಶಿಕ್ಷಣ ಸಂಸ್ಥೆಯಿಂದ 150 ಮೀಟರ್ ದೂರದಲ್ಲಿರುವುದರಿಂದ ಅದನ್ನು ಮುಚ್ಚಲು ನಿರ್ದೇಶಿಸಿತು. ಇಂತಹ ಸ್ಥಳದಲ್ಲಿ ವೈನ್ ಶಾಪ್ ತೆರೆಯುವುದು ಕೆ ಬಾಲು ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಅದು ಅಭಿಪ್ರಾಯಪಟ್ಟಿತ್ತು.

ಈ ತೀರ್ಪನ್ನು ಪ್ರಶ್ನಿಸಿದ ಪಾಂಡಿಚೇರಿ ಸರ್ಕಾರ, ಸುಪ್ರೀಂ ಕೋರ್ಟ್‌ ಆಮೇಲೆ ನೀಡಿದ ಆದೇಶಗಳು ಪುರಸಭೆ ಪ್ರದೇಶದಲ್ಲಿ ದೂರ ಮಿತಿ ನಿಯಮಗಳನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದೆ ಎಂದು ವಾದಿಸಿತು. ಪಾಂಡಿಚೇರಿ ಸರ್ಕಾರ ದೂರವನ್ನು 50 ಮೀಟರ್ ಎಂದು ನಿರ್ಧರಿಸಿ ಮದ್ಯದಂಗಡಿಗೆ ಅನುಮತಿ ನೀಡಿತ್ತು ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ವಾದಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ತನ್ನ ಹಿಂದಿನ ಆದೇಶ ಹಿಂತೆಗೆದುಕೊಂಡಿತು. ಸುಪ್ರೀಂ ಕೋರ್ಟ್ ಹೊರಡಿಸಿದ ಸ್ಪಷ್ಟೀಕರಣವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ನಿಭಾಯಿಸಲು ಹೈಕೋರ್ಟ್‌ಗೆ ಸ್ವಾತಂತ್ರ್ಯ ನೀಡುವ ಮೂಲಕ ಸಂಬಂಧಿತ ಸಿವಿಲ್ ಮೇಲ್ಮನವಿಯನ್ನು ಸಹ ವಿಲೇವಾರಿ ಮಾಡಲಾಯಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Alankar Wines Private Limited Vs Human Rights and Consumer Protection Society & Anr.pdf
Preview

Related Stories

No stories found.
Kannada Bar & Bench
kannada.barandbench.com