ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಜಾಮೀನು ಷರತ್ತು ವಿಧಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ: ಸುಪ್ರೀಂ ಕೋರ್ಟ್‌

ಅರ್ಜಿ ಸಲ್ಲಿಸಿರುವ ಒಡಿಶಾದ ಬಿಜೆಪಿ ನಾಯಕ ಮತ್ತು ಬೆಹರಾಂಪುರದ ಮಾಜಿ ಮೇಯರ್ ಸಿಬಾ ಶಂಕರ್ ದಾಸ್ ಅವರು ಬಿಜು ಜನತಾದಳ ತೊರೆದು ಬಿಜೆಪಿ ಸೇರಿದ್ದರು. ಆ ಬಳಿಕ ಅವರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ರಾಜಕಾರಣಿಗೆ ಜಾಮೀನು ಷರತ್ತು ವಿಧಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ (ಸಿಬಾ ಶಂಕರ್ ದಾಸ್ ಮತ್ತು ಒಡಿಶಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ).

ಆ ಮೂಲಕ ಒರಿಸ್ಸಾ ಹೈಕೋರ್ಟ್‌ ವಿಧಿಸಿದ್ದ ಜಾಮೀನು ಷರತ್ತುಗಳನ್ನು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಬದಿಗೆ ಸರಿಸಿದೆ.

ಹಾಗೆ ಷರತ್ತು ವಿಧಿಸುವುದು ಮೇಲ್ಮನವಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಂತಹ ಯಾವುದೇ ಷರತ್ತು ವಿಧಿಸುವಂತಿಲ್ಲ. ಆದ್ದರಿಂದ, ಹೈಕೋರ್ಟ್‌ ವಿಧಿಸಿದ ಷರತ್ತುಗಳನ್ನು ರದ್ದುಗೊಳಿಸಲಾಗುತ್ತಿದೆ. ಅಂತೆಯೇ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಮಾರ್ಚ್ 22ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ

ಮೇಲ್ಮನವಿ ಸಲ್ಲಿಸಿದ್ದ ಒಡಿಶಾದ ಬಿಜೆಪಿ ನಾಯಕ ಮತ್ತು ಬೆಹರಾಂಪುರದ ಮಾಜಿ ಮೇಯರ್ ಸಿಬಾ ಶಂಕರ್ ದಾಸ್ ಬಿಜು ಜನತಾದಳ ತೊರೆದು ಬಿಜೆಪಿ ಸೇರಿದ್ದರು. ಆ ಬಳಿಕ ಅವರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಅವರಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವಾಗ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಒರಿಸ್ಸಾ ಹೈಕೋರ್ಟ್‌ ಷರತ್ತು ವಿಧಿಸಿತ್ತು.

"ಮೇಲ್ಮನವಿದಾರರು ಸಾರ್ವಜನಿಕವಾಗಿ ಯಾವುದೇ ಅಹಿತಕರ ಪರಿಸ್ಥಿತಿ ಸೃಷ್ಟಿಸಬಾರದು ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು" ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಕೌಶಲ್ಯ ಅಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸಾರ್ವಜನಿಕ ಸಮಾವೇಶ ಮತ್ತು ಸಭೆಗಳಲ್ಲಿ ಭಾಗವಹಿಸದಂತೆ ಆಂಧ್ರಪ್ರದೇಶ ಹೈಕೋರ್ಟ್ ಜಾಮೀನು ಷರತ್ತು ವಿಧಿಸಿತ್ತು. ಈ ಆದೇಶವನ್ನು ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Siba Shankar Das vs State of Odisha and anr.pdf
Preview

Related Stories

No stories found.
Kannada Bar & Bench
kannada.barandbench.com