

ಕಾಂಗ್ರೆಸ್ ವಕ್ತಾರ ಮೈಸೂರಿನ ಎಂ ಲಕ್ಷ್ಮಣ ಅವರ ವಿರುದ್ಧ ಬಿಜೆಪಿಯ ಮೈಸೂರು-ಕೊಡಗಿನ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ಲಕ್ಷ್ಮಣ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಆದೇಶಿಸಿದೆ.
ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 32ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ ಲತಾ ಅವರು ಈ ಆದೇಶ ಮಾಡಿದ್ದಾರೆ.
ಐಪಿಸಿ ಸೆಕ್ಷನ್ 500ರ ಅಡಿ (ಮಾನನಷ್ಟ) ಅಪರಾಧಕ್ಕಾಗಿ ಪ್ರಕರಣ ದಾಖಲಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಆರೋಪಿಯ ವಿರುದ್ಧ ಜೂನ್ 12ರ ಒಳಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಅವರು 2023ರ ಜೂನ್ 16ರಂದು ಮಾಧ್ಯಮ ಗೋಷ್ಠಿ ನಡೆಸಿದ್ದರು. ಅಲ್ಲಿ ಪ್ರತಾಪ್ ಸಿಂಹ ಅವರು ಯಾರನ್ನೋ ಒಬ್ಬರನ್ನು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿ ಅವರ ಮೂಲಕ ಸಂಗ್ರಹಿಸಿದ ಹಣ ಹಾಗೂ ಮೈಸೂರು-ಬೆಂಗಳೂರಿನ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಪಡೆದ ಕಮಿಷನ್ ಹಣವು ಸೇರಿದಂತೆ ರೂ. 50 ಕೋಟಿ ಹಣವನ್ನು ಕೊಡಗು ನ್ಯೂಟ್ರಿಷಿಯನ್ ಎಂಬ ಕಂಪೆನಿಯಲ್ಲಿ ಬೇನಾಮಿ ಹೂಡಿಕೆ ಮಾಡಿದ್ದಾರೆ. ಇದಕ್ಕೆ ಕೆಲವು ಅಧಿಕಾರಿಗಳೂ ಹಣ ಹೂಡಿಕೆ ಮಾಡಿದ್ದಾರೆ. ಈ ಸಂಬಂಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳಿಗೆ ದೂರು ನೀಡಲಾಗುವುದು ಎಂದು ಆರೋಪಿಸಿದ್ದರು. ಅಲ್ಲದೇ, ಈ ಸಂಬಂಧ ತನಿಖೆ ನಡೆಸಲು ಮುಖ್ಯಮಂತ್ರಿಗೂ ಕೋರಲಾಗುವುದು ಎಂದು ಹೇಳಿದ್ದರು ಎಂದು ಖಾಸಗಿ ದೂರಿನಲ್ಲಿ ಪ್ರತಾಪ್ ಸಿಂಹ ಆಕ್ಷೇಪಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಕಚೇರಿಗೆ ನಿರ್ದೇಶಿಸಿದೆ.