ಬೆಂಗಳೂರು ವಕೀಲರ ಸಂಘದ ಬಗ್ಗೆ ಮೆಚ್ಚುಗೆ ಸೂಚಿಸಿದ ನ್ಯಾ. ಅಲೋಕ್‌ ಅರಾಧೆ

ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಅಲೋಕ್‌ ಅರಾಧೆ ಅವರು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದ ಬೆಂಗಳೂರು ವಕೀಲರ ಸಂಘ.
ಬೆಂಗಳೂರು ವಕೀಲರ ಸಂಘದ ಬಗ್ಗೆ ಮೆಚ್ಚುಗೆ ಸೂಚಿಸಿದ  ನ್ಯಾ. ಅಲೋಕ್‌ ಅರಾಧೆ

“ದೇಶದಲ್ಲೇ ಬೆಂಗಳೂರು ವಕೀಲರ ಸಂಘ ಅತ್ಯುತ್ತಮವಾದುದು, ಅಂತೆಯೇ, ಬೆಂಗಳೂರು ಒಂದು ಸುಂದರ ನಗರಿ‌, ಎಲ್ಲ ಸಹೃದಯಿಗಳ ಪ್ರೀತಿಯ ಮಧುರ ನೆನಪುಗಳನ್ನು ಹೊತ್ತು ತೆರಳುತ್ತಿದ್ದೇನೆ” ಎಂದು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅಲೋಕ್‌ ಅರಾಧೆ ಭಾವುಕರಾದರು.

ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಅರಾಧೆ ಅವರನ್ನು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಶುಕ್ರವಾರ ಹೈಕೋರ್ಟ್‌ನ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ಅರಾಧೆ ಒಬ್ಬ ಕಠಿಣ ಪರಿಶ್ರಮಿ. ಕಿರಿಯರಿಗೆ ಮಾದರಿಯಾಗಬಲ್ಲ ವೃತ್ತಿ ಬದ್ಧತೆ ವ್ಯಕ್ತಿತ್ವ ಅವರದ್ದು. ನ್ಯಾಯದಾನದ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ತೆಲಂಗಾಣದಲ್ಲಿ ಅವರು ನ್ಯಾಯಮೂರ್ತಿಯಾಗಿ ಇನ್ನಷ್ಟು ಹೆಸರು ಪಡೆಯಲಿ” ಎಂದು ಆಶಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ಅವರು “ಅಲೋಕ್‌ ಅರಾಧೆ ಒಬ್ಬ ಸರಳ ಜೀವಿ. ಜಮ್ಮು ಕಾಶ್ಮೀರ ಹೈಕೋರ್ಟ್‌ನಿಂದ ಇಲ್ಲಿಗೆ ಯಾವ ರೀತಿ ಸರಳವಾಗಿ ಇಲ್ಲಿಗೆ ಬಂದರೋ ಅಷ್ಟೇ ಸರಳತೆಯಿಂದ ತೆಲಂಗಾಣಕ್ಕೆ ತೆರಳುತ್ತಿರುವುದು ಅವರ ವಿಶೇಷತೆ. ಒಬ್ಬ ಅತ್ಯುತ್ತಮ ನ್ಯಾಯಮೂರ್ತಿ ಇಲ್ಲಿಂದ ನಿರ್ಗಮಿಸುತ್ತಿದ್ದಾರೆ ಎಂಬ ವಿಷಾದ ಮತ್ತು ಸಂತೋಷ ಎರಡೂ ಒಟ್ಟಿಗೇ ಆಗುತ್ತಿದೆ” ಎಂದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ಅರಾಧೆ ಒಬ್ಬ ಶಿಕ್ಷಕ, ಲೇಖಕ ಮತ್ತು ಪ್ರೀತಿಪಾತ್ರ ಸಜ್ಜನ ವ್ಯಕ್ತಿತ್ವದ ನ್ಯಾಯಮೂರ್ತಿ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ವಕೀಲರಾದ ಎನ್‌ ಪಿ ಅಮೃತೇಶ್‌, ರಾಜು ಮತ್ತು ಹೇಮಲತಾ ಸೇರಿದಂತೆ ವಕೀಲ ಸಮದಾಯ ಸಮಾರಂಭದಲ್ಲಿ ಭಾಗಿಯಾಗಿತ್ತು.

Kannada Bar & Bench
kannada.barandbench.com