ವರ್ಷದ ನಂತರ ನಿವೃತ್ತ ನ್ಯಾ. ರಮೇಶ್ ವಿರುದ್ಧದ ದೋಷಪೂರಿತ ವರದಿ ಕೈಬಿಟ್ಟ ಬೆಂಗಳೂರು ಮಿರರ್; ಬೇಷರತ್ ಕ್ಷಮೆಯಾಚನೆ

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌ ಜಿ ರಮೇಶ್ ವಿರುದ್ಧ ಪ್ರಕಟಿಸಿದ್ದ ದೋಷಪೂರಿತ ವರದಿಯನ್ನು ತೆಗೆದು ಹಾಕಿದ್ದು, ಈ ಸಂಬಂಧ ಬೇಷರತ್ ಕ್ಷಮೆಯಾಚಿಸುವುದಾಗಿ ಬೆಂಗಳೂರು ಮಿರರ್ ಪತ್ರಿಕೆ ಶನಿವಾರ ಹೇಳಿದೆ.
ವರ್ಷದ ನಂತರ ನಿವೃತ್ತ ನ್ಯಾ. ರಮೇಶ್ ವಿರುದ್ಧದ ದೋಷಪೂರಿತ ವರದಿ ಕೈಬಿಟ್ಟ ಬೆಂಗಳೂರು ಮಿರರ್; ಬೇಷರತ್ ಕ್ಷಮೆಯಾಚನೆ
Published on

ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಚ್‌ ಜಿ ರಮೇಶ್ ಅವರ ವಿರುದ್ಧ ವರ್ಷದ ಹಿಂದೆ “ಎ ಬ್ಯಾಡ್‌ ಜಡ್ಜ್ ಆಫ್‌ ಸಿಟೀಸ್‌ ಲಾಸ್” ಎಂಬ ತಲೆಬರಹ ನೀಡಿ ಪ್ರಕಟಿಸಿದ್ದ ವರದಿಯನ್ನು ಆಂಗ್ಲ ಮಾಧ್ಯಮವಾದ ಬೆಂಗಳೂರು ಮಿರರ್ ಹಿಂಪಡೆದಿದೆ. ನಿವೃತ್ತ ನ್ಯಾಯಮೂರ್ತಿ ರಮೇಶ್ ಅವರು ಬೆಂಗಳೂರಿನಲ್ಲಿ ಭೂ ಒತ್ತುವರಿ ಮಾಡಿಕೊಂಡು ನಿವಾಸ ನಿರ್ಮಿಸಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ನಿವೃತ್ತ ನ್ಯಾಯಮೂರ್ತಿ ರಮೇಶ್ ಅವರ ಚಿತ್ರವನ್ನು ಒಳಗೊಂಡ ವರದಿಯನ್ನು 2019ರ ಆಗಸ್ಟ್ 29ರಂದು ಬೆಂಗಳೂರು ಮಿರರ್ ಪತ್ರಿಕೆ ಪ್ರಕಟಿಸಿತ್ತು. ಹಲವು ಕಟ್ಟಡ ನಿರ್ಮಾಣ ಕಾನೂನುಗಳನ್ನು (ಬೈ ಲಾ) ಉಲ್ಲಂಘಿಸಿ ಭೂ ಒತ್ತುವರಿ ಮಾಡಿಕೊಂಡು ನಿವೃತ್ತ ನ್ಯಾಯಮೂರ್ತಿ ರಮೇಶ್ ಅವರು ತಮ್ಮ ನಿವಾಸ ನಿರ್ಮಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ದೂರಲಾಗಿತ್ತು.

“ಕರ್ನಾಟಕ ಹೈಕೋರ್ಟ್ ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌ ಜಿ ರಮೇಶ್ ಅವರು ಎಚ್ ಎಸ್ ಆರ್ ಲೇಔಟ್ ನಲ್ಲಿ ಭವ್ಯ ಬಂಗಲೆ ನಿರ್ಮಿಸುತ್ತಿದ್ದಾರೆ. ರಮೇಶ್ ಅವರು ಹಲವು ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯುವರು ದೂರಿರುವುದಾಗಿ” ವರದಿಯಲ್ಲಿ ವಿವರಿಸಲಾಗಿತ್ತು.

ವರದಿಯಿಂದ ನೊಂದ ನಿವೃತ್ತ ನ್ಯಾ. ರಮೇಶ್ ಅವರ ಪರವಾಗಿ ಬೆಂಗಳೂರು ಮಿರರ್ ಪತ್ರಿಕೆಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಪ್ರಕಟವಾದ ವರದಿ ಆಧಾರರಹಿತವಾಗಿದ್ದು, ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಲಾಗಿತ್ತು.

ನಿವೃತ್ತ ನ್ಯಾ. ರಮೇಶ್ ಅವರ ವಿರುದ್ಧ ಪ್ರಕಟಿಸಿದ್ದ ವರದಿಯಲ್ಲಿನ ಅಂಶಗಳು ಆಧಾರರಹಿತವಾಗಿದ್ದವು ಎಂದು ಒಪ್ಪಿಕೊಂಡಿರುವ ಬೆಂಗಳೂರು ಮಿರರ್ ಪತ್ರಿಕೆಯು ಸದರಿ ವರದಿಯನ್ನು ಹಿಂಪಡೆದಿದೆ. ಇದರ ಜೊತೆಗೆ ಪತ್ರಿಕೆಯು ನಿವೃತ್ತ ನ್ಯಾ. ರಮೇಶ್ ಅವರಿಗೆ ವರದಿಯಿಂದಾದ ಮಾನಸಿಕ ವೇದನೆ ಹಾಗೂ ನೋವಿಗೆ ಬೇಷರತ್ ಕ್ಷಮೆಯಾಚಿಸುವುದಾಗಿ ಹೇಳಿದೆ.

ಪತ್ರಿಕೆಯ ಕ್ಷಮೆಯಾಚನೆ ಇಂತಿದೆ:

“2019ರ ಆಗಸ್ಟ್‌ 29ರಂದು “ಎ ಬ್ಯಾಡ್‌ ಜಡ್ಜ್ ಆಫ್‌ ಸಿಟೀಸ್‌ ಲಾಸ್‌” ಎಂಬ ತಲೆಬರಹದಡಿ ನಿವೃತ್ತ ನ್ಯಾ. ರಮೇಶ್ ಅವರ ಚಿತ್ರವನ್ನೊಳಗೊಂಡ ವರದಿ ಪ್ರಕಟಿಸಲಾಗಿತ್ತು. ಮೂಲಗಳಿಂದ ಸ್ವೀಕರಿಸಿದ ಹೇಳಿಕೆಗಳನ್ನು ಆಧರಿಸಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ವರದಿಯಲ್ಲಿನ, ನಿವೃತ್ತ ನ್ಯಾ. ರಮೇಶ್ ಅವರು ಭೂ ಒತ್ತುವರಿ ಮಾಡಿ ಬಂಗಲೆ ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣ ಕಾನೂನುಗಳನ್ನು ಉಲ್ಲಂಘಿಸಿ ನಿವಾಸ ನಿರ್ಮಿಸಲಾಗಿದೆ. ಇತರರು ಪಾರ್ಕಿಂಗ್ ಮಾಡುವುದನ್ನು ತಡೆಯಲು ಗಿಡಗಳನ್ನು ನೆಡಲಾಗಿದೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ದ ಹೇಳಿಕೆಗಳು ದೋಷಪೂರಿತವಾಗಿರುವುದು ನಮ್ಮ ಗಮನಕ್ಕೆ ಈಗ ಬಂದಿದ್ದು, ಅವುಗಳು ಅಸತ್ಯವಾಗಿವೆ. ನಿವೃತ್ತ ನ್ಯಾ. ರಮೇಶ್ ಅವರನ್ನು ನಾವು ಅತ್ಯಂತ ಘನತೆಯಿಂದ ನೋಡುತ್ತೇವೆ. ಉಲ್ಲೇಖಿಸಲಾದ ಹೇಳಿಕೆಗಳು ದೋಷಪೂರಿತವಾಗಿದ್ದು ಇದಕ್ಕಾಗಿ ವಿಷಾದಿಸುತ್ತೇವೆ ಹಾಗೂ ಸಂಪೂರ್ಣವಾಗಿ ಹಿಂಪಡೆಯುತ್ತೇವೆ. ದೋಷಪೂರಿತ ವರದಿಯಿಂದ ನಿವೃತ್ತ ನ್ಯಾ. ರಮೇಶ್ ಅವರಿಗೆ ಉಂಟಾದ ಮಾನಸಿಕ ಕ್ಷೋಭೆ ಮತ್ತು ನೋವಿಗೆ ಕ್ಷಮೆ ಕೋರುತ್ತೇವೆ”.

Kannada Bar & Bench
kannada.barandbench.com