ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಕೆ ಜಿ ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್ ಅಲಿಯಾಸ್ ಇಮ್ರಾನ್ ಖಾನ್‌ಗೆ ಈಚೆಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಜಾಮೀನು ಮನವಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಅನಂತ್ ರಾಮನಾಥ್ ಹೆಗ್ಡೆ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ವಜಾ ಮಾಡಿದೆ.
“ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967ರ ಸೆಕ್ಷನ್‌ಗಳಾದ 15 ಮತ್ತು 20ರ ಅಡಿ ಆರೋಪಿ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿವೆ. ಕೆ ಜಿ ಹಳ್ಳಿ ಪೊಲೀಸ್ ಠಾಣೆಯ ಮುಂದಿದ್ದ ಬೈಕ್‌ಗಳಿಗೆ ಆರೋಪಿ ಇಮ್ರಾನ್ ಅಹ್ಮದ್ ಮತ್ತು ಇತರರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನ್ನು ಪೊಲೀಸರು ನೋಡಿದ್ದಾರೆ. ಆರೋಪಪಟ್ಟಿಯಲ್ಲಿ ಸಾಕ್ಷಿಗಳನ್ನಾಗಿ ಉಲ್ಲೇಖಿಸಿರುವ ಪೊಲೀಸರು ಘಟನೆಯಲ್ಲಿ ಇಮ್ರಾನ್ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ಗಲಭೆ ಆರಂಭವಾಗುವುದಕ್ಕೂ ಮುನ್ನ ರಾತ್ರಿ 8.45 ರಿಂದ 9.15ರ ಅವಧಿಯಲ್ಲಿ ಇಮ್ರಾನ್ ಸಹ ಆರೋಪಿಗಳ ಜೊತೆ ಸಭೆ ನಡೆಸಿದ್ದರು ಎಂದು ಮತ್ತೊಬ್ಬರು ಸಾಕ್ಷ್ಯ ನುಡಿದಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅರ್ಜಿದಾರ ಇಮ್ರಾನ್ ಅಹ್ಮದ್ ಪರ ವಕೀಲ ತನ್ವೀರ್ ಅಹ್ಮದ್ ಮಿರ್ ಅವರು “ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಗಲಭೆಗೆ ಪ್ರಚೋದನೆ ನೀಡುವ ಉದ್ದೇಶ ಹೊಂದಿರಲಿಲ್ಲ. ಶಾಂತಿಯುತವಾಗಿ ಪೊಲೀಸ್ ಠಾಣೆಯ ಮುಂದೆ ನೆರೆದಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿದ್ದನ್ನು ಭಯೋತ್ಪಾದನಾ ಕೃತ್ಯ ಎನ್ನಲಾಗದು. ಇದು ಭಾರತೀಯ ದಂಡ ಸಂಹಿತೆಯ ನಿಬಂಧನೆ ವ್ಯಾಪ್ತಿಗೆ ಒಳಪಡುತ್ತದೆ” ಎಂದು ವಾದಿಸಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಸಾಮಾನ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಮೂಲಕ ಭಯೋತ್ಪಾದನಾ ಕೃತ್ಯಕ್ಕೆ ಇಮ್ರಾನ್ ಅಹ್ಮದ್ ಕುಮ್ಮಕ್ಕು ನೀಡಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ಜಾಮೀನು ಮನವಿಯನ್ನು ವಿಚಾರಣಾಧೀನ ನ್ಯಾಯಾಲಯವು ತಿರಸ್ಕರಿಸಿದ್ದು, ಹೈಕೋರ್ಟ್‌ನ ಮತ್ತೊಂದು ವಿಭಾಗೀಯ ಪೀಠವು ಆ ಆದೇಶವನ್ನು ಎತ್ತಿ ಹಿಡಿದಿದೆ” ಎಂದು ಪೀಠದ ಗಮನಕ್ಕೆ ತಂದಿದ್ದರು.