
ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ವೇಳೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಖುದ್ದು ಹಾಜರಾಗುವುದು ಕಡ್ಡಾಯವಲ್ಲ. ಸಂಬಂಧಿತ ದಾಖಲೆಗಳಿಗೆ ಅನುಮತಿ ಇರುವ ಬ್ಯಾಂಕ್‌ನ ಯಾವುದೇ ಅಧಿಕೃತ ಅಧಿಕಾರಿ ಪ್ರಮಾಣಿಸಲು ಸಮರ್ಥರು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಇಫ್ತಿಕರ್ ಅಶ್ರಫ್ ಟ್ರಂಬೂ ಮತ್ತು ಫರ್ಕಾನ್ ಅಹ್ಮದ್ ರಾಥರ್ ನಡುವಣ ಪ್ರಕರಣ].
ಚೆಕ್ ಬೌನ್ಸ್ ರೀತಿಯ ಪ್ರಕರಣಗಳಲ್ಲಿನ ಪುರಾವೆಗಳು ಅಧಿಕೃತ ಬ್ಯಾಂಕ್ ದಾಖಲೆಗಳನ್ನು ಆಧರಿಸಿರುವುದರಿಂದ, ಶಾಖೆಯ ವ್ಯವಸ್ಥಾಪಕರು ಖುದ್ದು ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಧರ್ ವಿವರಿಸಿದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ಬ್ಯಾಂಕಿನ ಅಧಿಕೃತ ಪ್ರತಿನಿಧಿಯ ಹೇಳಿಕೆಯನ್ನು ದಾಖಲಿಸಲು ವಿಚಾರಣಾ ನ್ಯಾಯಾಲಯ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ವಿಚಾರ ತಿಳಿಸಿದೆ.
ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಸಾಕ್ಷಿಯಾಗಿರುವುದರಿಂದ, ಅವರು ಖುದ್ದು ಹಾಜರಾಗಬೇಕೆಂದು 1881ರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆಯ (ವರ್ಗಾವಣೀಯ ಲಿಖಿತಗಳ ಕಾಯಿದೆ) ಸೆಕ್ಷನ್ 138ರ ಅಡಿಯಲ್ಲಿ ಸಲ್ಲಿಸಲಾದ ದೂರಿನಲ್ಲಿ ವಿಚಾರಣಾ ನ್ಯಾಯಾಲಯ ಸೂಚಿಸಿತ್ತು.
ಗಮನಾರ್ಹ ಸಂಗತಿ ಎಂದರೆ ಶಾಖಾ ವ್ಯವಸ್ಥಾಪಕ ಹೇಳಿಕೆ ದಾಖಲಿಸಲು ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು ಆರೋಪಿ ಅಥವಾ ಅವರ ಪರ ವಕೀಲರು ದೊರೆಯದೆ ಅಂದಿನ ನ್ಯಾಯಾಲಯ ಕಲಾಪಗಳಂದ ತಮ್ಮ ಹೇಳಿಕೆ ಸಾಧ್ಯವಾಗಿರಲಿಲ್ಲ. ನಂತರ ಬ್ಯಾಂಕಿನ ಅಧಿಕೃತ ಪ್ರತಿನಿಧಿಯನ್ನು ವಿಚಾರಣಾ ನ್ಯಾಯಾಲಯದೆದುರು ಹಾಜರಾಗಲು ಕಳುಹಿಸಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಣಾ ನ್ಯಾಯಾಲಯ ಬ್ಯಾಂಕ್ ವ್ಯವಸ್ಥಾಪಕರಷ್ಟೇ ಹೇಳಿಕೆ ದಾಖಲಿಸಬಹುದು ಎಂದಿತ್ತು. ಇದನ್ನು ದೂರುದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
[ತೀರ್ಪಿನ ಪ್ರತಿ]