

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸೀಲ್ ಅಥವಾ ಸಹಿಗಳಿಲ್ಲದ ಕಂಪ್ಯೂಟರ್-ಆಧಾರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಮಾನ್ಯ ಪುರಾವೆಗಳಾಗಿವೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ಆರ್ ಜಗದೀಶ್ (ಆರೋಪಿ) ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಎಲೆಕ್ಟ್ರಾನಿಕ್ ವಿಧಾನದಲ್ಲಿ ಚೆಕ್ ಕ್ಲಿಯರ್ ಆಗಿರುವುದರಿಂದ ಸೀಲು ಮತ್ತು ಸಹಿ ಕಡ್ಡಾಯವಲ್ಲ. ಸಹಿ ಮತ್ತು ಸೀಲ್, ಅಧಿಕೃತ ಮುದ್ರೆ ಇತ್ಯಾದಿ.. ದೂರನ್ನು ತಿರಸ್ಕರಿಸಲು ಅಧಿಕೃತ ಆಧಾರವಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಚೆಕ್ ಅನ್ನು ಹಸ್ತಚಾಲಿತ ಸಂಗ್ರಹಣೆಗೆ ಕಳುಹಿಸುವಾಗ ಬ್ಯಾಂಕಿನ ಸೀಲು ಮತ್ತು ಸಹಿ ಕಡ್ಡಾಯ ಅವಶ್ಯಕತೆ ಎಂಬುದನ್ನು ಸಹ ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿದೆ.
“ಚೆಕ್ ಆರೋಪಿಗೆ ಸೇರಿದ್ದು, ಸಹಿ ಸಹ ಅವರದ್ದೇ ಎಂಬುದು ನಿರ್ವಿವಾದ. ದೂರುದಾರ ಮತ್ತು ಆರೋಪಿ ನಡುವೆ ಕೊಡು-ಕೊಳ್ಳುವಿಕೆ ನಡೆದಿದೆ ಎಂಬುದು ದೃಢಪಟ್ಟಿದೆ. ವರ್ಗಾವಣಿಯ ಲಿಖಿತಗಳ ಅಧಿನಿಯಮದ ಸೆಕ್ಷನ್ 139ರ ಅಡಿ ತನಗೆ ಲಭ್ಯವಿರುವ ಅವಕಾಶವನ್ನು ದೂರುದಾರ ಬಳಕೆ ಮಾಡಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
“ದೂರುದಾರರ ಸೊಸೈಟಿಗೆ ಖಾತರಿಯಾಗಿ ಎರಡು ಚೆಕ್ ನೀಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಒಂದನ್ನು ದೂರುದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಖಾಲಿ ಚೆಕ್ ಅನ್ನು ಸೊಸೈಟಿಯು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ದಾಖಲೆ ಇಟ್ಟಿಲ್ಲ ಎಂದು ಆರೋಪಿ ಹೇಳಿದ್ದಾರೆ. 03.11.2015ರಂದು ಚೆಕ್ ನೀಡಲಾಗಿದ್ದು, ಈ ವೇಳೆಗೆ ಆದಿತ್ಯ ಸೊಸೈಟಿಯಿಂದ ಪಡೆದಿದ್ದ ಸಾಲವನ್ನು ತೀರಿಸಲಾಗಿದೆ. ಆದರೆ, ತಾನು ನೀಡಿದ್ದ ಎರಡು ಖಾಲಿ ಚೆಕ್ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿರಲಿಲ್ಲ. ಅಲ್ಲದೇ, ಚೆಕ್ ದುರ್ಬಳಕೆ ಮಾಡಿಕೊಂಡಿರುವುದಕ್ಕೂ ಆರೋಪಿಯು ದೂರುದಾರನ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಆರೋಪಿಯು ₹3 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಮುಂದಿನ ದಿನಾಂಕ ಹಾಕಿ ಚೆಕ್ ಅನ್ನು ಖಾತರಿಯಾಗಿ ನೀಡಿದ್ದರು. ನಿಗದಿತ ದಿನಾಂಕದಂದು ಚೆಕ್ ಅನ್ನು ನಗದು ಮಾಡಿಕೊಳ್ಳಲು ಬ್ಯಾಂಕ್‌ಗೆ ಸಲ್ಲಿಸಿದಾಗ ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. ಅದಾನಂತರ ದೂರುದಾರರು ಆರೋಪಿಗೆ ಲೀಗಲ್ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ದಾವೆ ಹೂಡಿದ್ದರು.
ಆರೋಪಿಯನ್ನು ಬೆಂಗಳೂರು ನ್ಯಾಯಾಲಯವು ದೋಷಿ ಎಂದು ತೀರ್ಮಾನಿಸಿ, ₹4 ಲಕ್ಷ ದಂಡ ವಿಧಿಸಿತ್ತು. ₹3.95 ಲಕ್ಷವನ್ನು ಪರಿಹಾರವನ್ನಾಗಿ ಪಾವತಿಸಲು ನಿರ್ದೇಶಿಸಿತ್ತು. ಐದು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ದಂಡವನ್ನಾಗಿ ಪಾವತಿಸಲು ನಿರ್ದೇಶಿಸಿತ್ತು.