ವಸೂಲಾದ ಹಣಕ್ಕೂ ಬಡ್ಡಿ ವಿಧಿಸುತ್ತಿರುವ ಬ್ಯಾಂಕ್‌ಗಳು: ಹೈಕೋರ್ಟ್‌ನಲ್ಲಿ ಮಲ್ಯ ಪರ ಸಜನ್‌ ಪೂವಯ್ಯ ವಾದ

“ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ಮಲ್ಯ ಹಾಜರಾಗಿಲ್ಲ. ಬೇರೆಡೆ ವಿಚಾರಣೆಗೂ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ ನೀವು ರಿಟ್‌ ಸಲ್ಲಿಸುವ ಹಕ್ಕನ್ನು ಹೇಗೆ ಹೊಂದುತ್ತೀರಿ” ಎಂದು ಪ್ರಶ್ನಿಸಿದ ಪೀಠ.
Vijay Mallya and Karnataka HC
Vijay Mallya and Karnataka HC
Published on

ಯುನೈಟೆಡ್‌ ಬ್ರಿವರೀಸ್‌ ಹೋಲ್ಡಿಂಗ್‌ ಲಿಮಿಟೆಡ್‌ (ಯುಬಿಎಚ್‌ಎಲ್‌) ಒಡೆತನದಲ್ಲಿದ್ದ ಹಿಂದಿನ ಕಿಂಗ್‌ ಫಿಷರ್‌ ಏರ್‌ಲೈನ್ಸ್‌ನಲ್ಲಿ ತಾನು ಹಾಗೂ ತನ್ನ ಕಂಪನಿ ಉಳಿಸಿಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ್ದರೂ ಬ್ಯಾಂಕುಗಳು ಮರುಪಾವತಿ ಮಾಡಿರುವ ಸಾಲದ ಮೊತ್ತಕ್ಕೂ ಬಡ್ಡಿ ವಿಧಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆದೇಶಿಸಬೇಕು ಎಂದು ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯ ಪರ ವಕೀಲರು ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಬ್ಯಾಂಕುಗಳಿಂದ ಸಾಲದ ಲೆಕ್ಕ ಕೋರಿ ವಿಜಯ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು.

Justice Lalitha Kanneganti
Justice Lalitha Kanneganti

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಅರ್ಜಿದಾರರ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರನ್ನು ಕುರಿತು ನೀವು ಕಂಪನಿ ನ್ಯಾಯಾಲಯಕ್ಕೆ ಅರ್ಜಿ ಏಕೆ ಸಲ್ಲಿಸಿಲ್ಲ” ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಪೂವಯ್ಯ ಅವರು “ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್‌ ಅಧೀನದಲ್ಲಿ ಬರುತ್ತದೆ. ಬ್ಯಾಂಕ್‌ನವರು ಒಂದು ಹೇಳುತ್ತಾರೆ, ಅಧಿಕೃತ ಲಿಕ್ವಿಡೇಟರ್‌ (ಕಂಪನಿಯನ್ನು ಮುಚ್ಚುವ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ನಿಯುಕ್ತಿಗೊಳಿಸಲಾದ ಅಧಿಕಾರಿ) ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಬಿಎಚ್‌ಎಲ್‌ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ವಿಜಯ್‌ ಮಲ್ಯ ನಿರ್ದೇಶಕರಾಗಿದ್ದರು. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕು” ಎಂದರು.

ಅದಕ್ಕೆ ಪೀಠವು “ಸುಪ್ರೀಂ ಕೋರ್ಟ್‌ನ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ ನೀವು ರಿಟ್‌ ಸಲ್ಲಿಸುವ ಹಕ್ಕನ್ನು ಹೇಗೆ ಹೊಂದುತ್ತೀರಿ” ಎಂದು ಪ್ರಶ್ನಿಸಿತು.

ಅದಕ್ಕೆ ಪೂವಯ್ಯ ಅವರು “ವಿಜಯ್‌ ಮಲ್ಯ ಲಂಡನ್‌ ನ್ಯಾಯಾಲಯದ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಮಲ್ಯ 6200 ಕೋಟಿ ರೂಪಾಯಿ ಸಾಲ ಪಾವತಿಸಬೇಕಿತ್ತು. 14,000 ಕೋಟಿ ವಸೂಲಾಗಿದೆ ಎಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ಅರ್ಜಿ ಸಲ್ಲಿಸಲಾಗಿದೆ” ಎಂದು ಸಮರ್ಥಿಸಿಕೊಂಡರು.

ಬ್ಯಾಂಕ್‌ಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ಮಲ್ಯ ದೇಶ ತೊರೆದು ಭ್ರಷ್ಟರಾಗಿದ್ದಾರೆ. ಅವರು ಮುಗ್ದರಾದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ತಮಗೆ ಬೇಕಾದಾಗ ಮಾತ್ರ ನ್ಯಾಯಾಲಯದ ಮುಂದೆ ಬರುತ್ತಾರೆ” ಎಂದರು.

ಅಧಿಕೃತ ಲಿಕ್ವಿಡೇಟರ್‌ಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯವು ಸಾಲದ ಹಣದ ಮಾಹಿತಿಯನ್ನೂ ಒದಗಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್‌ 12ಕ್ಕೆ ಮುಂದೂಡಿತು.

Kannada Bar & Bench
kannada.barandbench.com