
ವಿಶ್ವ ಪ್ರಸಿದ್ದ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮತ್ತೆರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.
ಹಿಂದೂ ಧರ್ಮದವರಲ್ಲದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗ ಎಂದು ಘೋಷಿಸಿ ಅದನ್ನು ಹಿಂದೂ ಗಣ್ಯರಿಂದ ಉದ್ಘಾಟಿಸಬೇಕು. ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಆಗದಂತೆ ಹಿಂದೂ ಆಗಮಿಕ ಪದ್ದತಿ ಪ್ರಕಾರವೇ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ನಿವಾಸಿ ಎಚ್ ಎಸ್ ಗೌರವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಇದಲ್ಲದೆ, ಇದೇ ವಿಚಾರವಾಗಿ ಬೆಂಗಳೂರಿನ ಉದ್ಯಮಿ ಟಿ ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್ ಸೌಮ್ಯ ಅವರು ಸಹ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಈಗಾಗಲೇ ಇದೇ ವಿಷಯವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅದರಂತೆ ದಸರಾ ಉದ್ಘಾಟನೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಮೂರು ಅರ್ಜಿಗಳು ಸಲ್ಲಿಕೆಯಾದಂತಾಗಿದೆ.