ಸಲಿಂಗ ವಿವಾಹ: ಶಾಸಕಾಂಗದ ಪರಿಗಣನೆಗೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ಬಿಸಿಐ

ಎಲ್ಲಾ ರಾಜ್ಯಗಳ ವಕೀಲರ ಪರಿಷತ್ಗಳೊಂದಿಗೆ ಜಂಟಿ ಸಭೆ ನಡೆಸಿದ ಬಳಿಕ ಇಂದು (ಏಪ್ರಿಲ್ 23, 2023) ಬಿಸಿಐ ಈ ನಿರ್ಣಯ ಅಂಗೀಕರಿಸಿದೆ.
same sex marriage and supreme court
same sex marriage and supreme court

ಎಲ್ಲಾ ರಾಜ್ಯಗಳ  ವಕೀಲರ ಪರಿಷತ್ತುಗಳೊಂದಿಗೆ ಭಾನುವಾರ ಸಭೆ ನಡೆಸಿರುವ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಣಯವೊಂದನ್ನು ಅಂಗೀಕರಿಸಿದೆ.

ಭಾರತ ಭಿನ್ನ ನಂಬಿಕೆಗಳ ವೈವಿಧ್ಯಮಯ ದೇಶವಾಗಿದ್ದು ಮೂಲಭೂತ ಸಾಮಾಜಿಕ ರಚನೆಗೆ ಧಕ್ಕೆ ತರುವ ಯಾವುದೇ ವಿಷಯ ಶಾಸಕಾಂಗ ಪ್ರಕ್ರಿಯೆಯನ್ನು ಹಾದುಬರಬೇಕು. ಇಂತಹ ಸೂಕ್ಷ್ಮ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಯಾವುದೇ ನಿರ್ಧಾರ ದೇಶದ ಭವಿಷ್ಯದ ಪೀಳಿಗೆಗೆ ಮಾರಕ ಎಂದು ನಿರ್ಣಯದ ಮೂಲಕ ತಿಳಿಸಲಾಗಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ 20ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಕಳೆದ ಮಂಗಳವಾರದಿಂದ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ಜೊತೆಗೆ ಮುಸ್ಲಿಂ ಧಾರ್ಮಿಕ ಸಂಘಟನೆ ಜಾಮಿಯತ್‌ ಉಲಾಮಾ- ಇ- ಹಿಂದ್‌ ಸಲಿಂಗ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದೆ. ಕುತೂಹಲದ ಸಂಗತಿ ಎಂದರೆ ಸಲಿಂಗ ವಿವಾಹ, ಸಲಿಂಗ ದಂಪತಿಯ ದತ್ತು ಮತ್ತು ಉತ್ತರಾಧಿಕಾರ ಹಕ್ಕುಗಳನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ದೆಹಲಿ ಆಯೋಗ (ಡಿಸಿಪಿಸಿಆರ್‌) ಅರ್ಜಿಯನ್ನು ಬೆಂಬಲಿಸಿದ್ದರೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ ಸಲಿಂಗ ದಂಪತಿಗೆ ದತ್ತು ಹಕ್ಕು ನೀಡಿದರೆ ಅದು ಅಂತಹ ಮಗುವಿಗೆ ವಿನಾಶಕಾರಿಯಾಗುತ್ತದೆ ಎಂದಿದೆ.

ಈ ಎಲ್ಲದರ ನಡುವೆ ಬಿಸಿಐ ಸಲಿಂಗ ವಿವಾಹದ ವಿಚಾರವನ್ನು ಶಾಸಕಾಂಗಕ್ಕೆ ಬಿಡಬೇಕು ಎಂದು ನಿರ್ಣಯ ಕೈಗೊಂಡಿದೆ.

ಬಿಸಿಐ ನಿರ್ಣಯದ ಪ್ರಮುಖಾಂಶಗಳು

  • ವಿಷಯ ಹೆಚ್ಚು ಸೂಕ್ಷ್ಮವಾಗಿದೆ. ಆಯ್ದ ಕೆಲವರು ಸಲಿಂಗ ವಿವಾಹದ ವಿಚಾರವಾಗಿ ಪ್ರಯೋಗ ಮಾಡುತ್ತಿರುವುದಕ್ಕೆ ಸಮಾಜದ ವಿವಿಧ ವರ್ಗಗಳು ಅದರಲ್ಲಿಯೂ ಸಾಮಾಜಿಕ- ಧಾರ್ಮಿಕ ಗುಂಪುಗಳಿಂದ ಟೀಕೆ, ಹೇಳಿಕೆಗಳು ಕೇಳಿಬರುತ್ತಿವೆ.

  • ಸಲಿಂಗ ವಿವಾಹ ಎಂಬುದು  ಸಾಮಾಜಿಕವಾಗಿ ಮತ್ತು ನೈತಿಕವಾಗಿ ಯೋಚನೆಗೀಡುಮಾಡುವಂತಹ ವಿಚಾರವಾಗಿದೆ.  

  • ವಿವಿಧ ಸಾಮಾಜಿಕ ಧಾರ್ಮಿಕ ಛಾಯೆಯನ್ನು ಹೊಂದಿರುವ ಸಲಿಂಗ ವಿವಾಹದ ಸಮಸ್ಯೆಯನ್ನು ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳನ್ನು ಒಳಗೊಂಡ ವಿಸ್ತೃತ ಸಮಾಲೋಚನಾ ಪ್ರಕ್ರಿಯೆಯ ನಂತರ ಶಾಸಕಾಂಗ ನಿಭಾಯಿಸಬೇಕು.

  • ಮೂಲಭೂತವಾಗಿ ಕಾನೂನು ತನ್ನ ಜನರ ಸಾಮೂಹಿಕ ಆತ್ಮಸಾಕ್ಷಿಯನ್ನು ಪ್ರತಿಬಿಂಬಿಸುವ ಕ್ರೋಡೀಕೃತ ಸಾಮಾಜಿಕ ರೂಢಿಯಾಗಿದೆ. ಜೊತೆಗೆ ಸಂಸ್ಕೃತಿಯೊಂದಿಗೆ ಹೆಣೆದುಕೊಂಡಿರುವ ಧರ್ಮವು ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಕಾನೂನು ಮತ್ತು ಸಾಮಾಜಿಕ ಮಾನದಂಡಗಳ ಕ್ರೋಡೀಕರಣವನ್ನು ಹೆಚ್ಚು ಪ್ರಭಾವಿಸುತ್ತದೆ.

  • ಮಾನವ ನಾಗರಿಕತೆ ಮತ್ತು ಸಂಸ್ಕೃತಿಯ ಆದಿಯಿಂದಲೂ, ಮದುವೆಯನ್ನು ವಿಶಿಷ್ಟವಾಗಿ ಒಪ್ಪಿಕೊಳ್ಳಲಾಗಿದೆ. ಸಂತಾನೋತ್ಪತ್ತಿ ಮತ್ತು ಮನರಂಜನೆಯ ಅವಳಿ ಉದ್ದೇಶಕ್ಕಾಗಿ ಜೈವಿಕ ಪುರುಷ ಮತ್ತು ಮಹಿಳೆಯ ಒಕ್ಕೂಟವಾಗಿ ವಿವಾಹವನ್ನು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ನ್ಯಾಯಾಲಯ ಮದುವೆಯ ಪರಿಕಲ್ಪನೆಯಂತಹ ಮೂಲಭೂತ ವಿಚಾರವನ್ನು ಅದೆಷ್ಟೇ ಸದ್ದುದ್ದೇಶದಿಂದ ಕೂಡಿದ್ದರೂ ಕೂಲಂಕಷವಾಗಿ ಪರಿಶೀಲಿಸುವುದು ದುರಂತದ ಸಂಗತಿಯಾಗುತ್ತದೆ.  

  • ದೇಶದ ಜನಸಾಮಾನ್ಯರ ಭಾವನೆಗಳು ಮತ್ತು ಕಟ್ಟುಪಾಡುಗಳನ್ನು ಗೌರವಿಸಿ ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹದ ವಿಚಾರವನ್ನು ಶಾಸಕಾಂಗದ ಪರಿಗಣನೆಗೆ ಬಿಡಬೇಕು.

Related Stories

No stories found.
Kannada Bar & Bench
kannada.barandbench.com