ವಕೀಲರ ಪರಿಷತ್ತುಗಳು ಉಳಿಯಬೇಕು ಎಂದ ಸುಪ್ರೀಂ: ಎಐಬಿಇ ಪರೀಕ್ಷಾ ಶುಲ್ಕ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ನಕಾರ

ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಬಿಸಿಐ ವಿಧಿಸುವ ನೋಂದಣಿ ಶುಲ್ಕಕ್ಕೆ ಈಗಾಗಲೇ ಮಿತಿ ನಿಗದಿಪಡಿಸಿದ್ದು ಇನ್ನಷ್ಟು ನಿರ್ಬಂಧಗಳು ವಕೀಲರ ಪರಿಷತ್ತಗಳನ್ನು ಕುಗ್ಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ವಕೀಲರ ಪರಿಷತ್ತುಗಳು ಉಳಿಯಬೇಕು ಎಂದ ಸುಪ್ರೀಂ: ಎಐಬಿಇ ಪರೀಕ್ಷಾ ಶುಲ್ಕ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ನಕಾರ
Published on

ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಬರೆಯಲು ₹3,500 ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ  ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಬಿಸಿಐ ವಿಧಿಸುವ ನೋಂದಣಿ ಶುಲ್ಕಕ್ಕೆ ಈಗಾಗಲೇ ಮಿತಿ ನಿಗದಿಪಡಿಸಿದ್ದು ಇನ್ನಷ್ಟು ನಿರ್ಬಂಧಗಳು ವಕೀಲರ ಪರಿಷತ್ತುಗಳನ್ನು ಕುಗ್ಗಿಸಬಹುದು ಎಂದು ನ್ಯಾಯಮೂರ್ತಿಗಳಾದ ಜೆ ಬಿ  ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತಿಳಿಸಿತು.  

Also Read
ಎಐಬಿಇ ಪರೀಕ್ಷೆಗೆ ಬಿಸಿಐ ₹ 3,500 ಶುಲ್ಕ: ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಶ್ನೆ

ನೀವು ವಕೀಲರು ಪರಿಷತ್ತುಗಳು ಉಳಿಯಬೇಕು ಎಂದು ಬಯಸುತ್ತೀರೋ ಇಲ್ಲವೋ? ನಾವು ಈಗಾಗಲೇ ಅವುಗಳ ಕೈಕಾಲು ಮುರಿದಿದ್ದೇವೆ. ಅವುಗಳು ಸಹ ತಮ್ಮ ಸಿಬ್ಬಂದಿಗಳಿಗೆ ವೇತನ ಪಾವತಿಸಬೇಕಿದೆ. ₹3,500 ಪಾವತಿಸುವ ವಕೀಲರು ಮುಂದೆ ₹3,50,000 ಸಂಪಾದಿಸಬಹುದು ಕೂಡ" ಎಂದು ನ್ಯಾಯಾಲಯ ನುಡಿಯಿತು.

ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಬಿಸಿಐ ವಕೀಲರ ನೋಂದಣಿಗಾಗಿ ವಿಧಿಸುವ ನೋಂದಣಿ ಶುಲ್ಕವು ವಕೀಲರ ಕಾಯ್ದೆಯಿಂದ ನಿಗದಿಪಡಿಸಿದ ಮಿತಿಯನ್ನು ಮೀರುವಂತಿಲ್ಲ ಎಂದು ಗೌರವ್‌ ಕುಮಾರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌  ಜುಲೈ 2024ರಲ್ಲಿ ನೀಡಿದ್ದ ತೀರ್ಪನ್ನು ಪೀಠ ಪ್ರಸ್ತಾಪಿಸಿತು.

ಕಡೆಗೆ ನ್ಯಾಯಾಲಯ ಅರ್ಜಿದಾರರಾದ ಸಂಯಮ್ ಗಾಂಧಿ ಅವರು ಮನವಿ ಹಿಂಪಡೆಯಲು ಮತ್ತು ಈ ಸಂಬಂಧ ಬಿಸಿಐಗೆ ಪತ್ರ ಬರೆಯಲು ಅವಕಾಶ ನೀಡಿತು. ಒಂದು ವೇಳೆ ಬಿಸಿಐ ಮನವಿ ತಿರಸ್ಕರಿಸಿದರೆ ಅರ್ಜಿದಾರರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ಅದು ತಿಳಿಸಿತು.

ಸಂಯಮ್ ಗಾಂಧಿ, ಎಐಬಿಇ ಪರೀಕ್ಷೆಗಾಗಿ ₹3,500 ಶುಲ್ಕ ವಿಧಿಸುವುದು ಸಂವಿಧಾನದ 14 ಮತ್ತು 19ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ವಕೀಲರ ಕಾಯಿದೆಗೆ ಶುಲ್ಕ ವಿರುದ್ಧವಾಗಿದೆ ಎಂದು ಅವರು ದೂರಿದ್ದರು.

Kannada Bar & Bench
kannada.barandbench.com