
ಸಕ್ರಿಯ ವಕೀಲ ಸಮುದಾಯ ಎಂಬುದು ಅನ್ಯಾಯದ ವಿರುದ್ಧ ರಕ್ಷಣೆ ಒದಗಿಸುವ ಮೊದಲ ಸಾಲಾಗಿದ್ದು, ಕಠಿಣ ಪರಿಸ್ಥಿತಿಯಲ್ಲಿ ಪ್ರಭುತ್ವಕ್ಕೆ ಸತ್ಯ ಹೇಳಬೇಕಾದ ಕೊನೆಯ ಭದ್ರಕೋಟೆಯೂ ಆಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದರು.
ಕಾನೂನು ಸಮುದಾಯ ತನ್ನ ನಿರಂತರ ಉತ್ಸಾಹ ಮತ್ತು ಭಾಗವಹಿಸುವಿಕೆಯ ಮೂಲಕ ಭಾರತೀಯ ನ್ಯಾಯಾಂಗ ಮತ್ತು ನ್ಯಾಯಶಾಸ್ತ್ರವನ್ನು ರೂಪಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೆಹಲಿ ಹೈಕೋರ್ಟ್ ಆವರಣದಲ್ಲಿರುವ ಡಿಐಎಸಿ ಸಭಾಂಗಣದಲ್ಲಿ ಮೇ 7ರಂದು ಆಯೋಜಿಸಲಾಗಿದ್ದ ತಮ್ಮ ಭಾಷಣಗಳ ಸಂಗ್ರಹ ಒಳಗೊಂಡಿರುವ, ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿಸಿರುವ 'ನೆರೇಟಿವ್ಸ್ ಆಫ್ ದ ಬೆಂಚ್, ಎ ಜಡ್ಜ್ ಸ್ಪೀಕ್ಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಾಂಗವು ಜನರ ವಿಶ್ವಾಸದ ಬುನಾದಿಯ ಮೇಲೆ ಅರಳುತ್ತದೆ. ಇದರ ವಿರುದ್ಧ ನಡೆಯುವ ಅನಗತ್ಯ ದಾಳಿಗಳು ಜನರ ವಿಶ್ವಾಸದ ಬುನಾದಿಗೆ ಪೆಟ್ಟು ನೀಡುತ್ತವೆ. ಕಾಲಾನುಕಾಲದಿಂದ ನ್ಯಾಯಾಂಗವು ಅನೇಕ ಸವಾಲುಗಳನ್ನು ಎದುರಿಸಿದ್ದು ಪ್ರತಿ ಸಂದರ್ಭದಲ್ಲಿಯೂ ವಿಜಯಶಾಲಿಯಾಗಿ ಹೊರಹೊಮ್ಮಿದೆ ಎಂದು ನ್ಯಾ. ರಮಣ ಅಭಿಪ್ರಾಯಪಟ್ಟರು.
ತಮ್ಮ ದೂರುದುಮ್ಮಾನಗಳನ್ನು ನಿವಾರಿಸಲು, ಹಕ್ಕುಗಳನ್ನು ಎತ್ತಿ ಹಿಡಿಯಲು ತಮ್ಮ ಬೆನ್ನಿಗೆ ನ್ಯಾಯಾಂಗ ನಿಲ್ಲುತ್ತದೆ ಎನ್ನುವ ಭರವಸೆ ನ್ಯಾಯಾಂಗದಲ್ಲಿನ ಎಲ್ಲರಲ್ಲೂ ಮೂಡಿದಾಗ ಅದು ರಾಜಕೀಯ, ಕಾರ್ಯಾಂಗದಂತಹ ಹೊರಗಿನ ಶಕ್ತಿಗಳ ಬೆಂಬಲವನ್ನು ಯಾಚಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ಭಾವಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಕೃತಿ ಕುರಿತು ಮಾತನಾಡಿದರು.