ನಿವೃತ್ತಿ ಬಳಿಕವೂ ನ್ಯಾ. ಮೇರಿ ತೀರ್ಪು ಬರೆಯುತ್ತಿದ್ದಾರೆ: ಕೇರಳ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಅಧ್ಯಕ್ಷ ಪತ್ರ

ಈಗ ತೀರ್ಪು ಬರೆದು ಹಿಂದಿನ ದಿನಾಂಕಕ್ಕೆ ಅನ್ವಯಿಸಲು ಅನುವಾಗುವಂತೆ ನಿವೃತ್ತಿ ಬಳಿಕವೂ ನ್ಯಾ. ಮೇರಿ ಹೈಕೋರ್ಟ್‌ನ ತಮ್ಮ ಚೇಂಬರ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ವಕೀಲರಾದ ಯಶವಂತ ಶೆಣೈ ವೈಯಕ್ತಿಕವಾಗಿ ಬರೆದ ಪತ್ರದಲ್ಲಿ ದೂರಿದ್ದಾರೆ.
Justice Mary Joseph and Kerala High Court
Justice Mary Joseph and Kerala High Court
Published on

ಜೂನ್ 2ರಂದು ನಿವೃತ್ತರಾಗಿರುವ ನ್ಯಾಯಮೂರ್ತಿ ಮೇರಿ ಜೋಸೆಫ್ ಅವರು ಆ ಬಳಿಕವೂ ತೀರ್ಪು ಬರೆಯುವುದನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ವಕೀಲರ ಸಂಘದ (ಕೆಎಚ್‌ಸಿಎಎ) ಅಧ್ಯಕ್ಷ ಯಶವಂತ ಶೆಣೈ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.

ಈಗ ತೀರ್ಪು ಬರೆದು ಹಿಂದಿನ ದಿನಾಂಕಕ್ಕೆ ಅನ್ವಯಿಸಲು ಅನುವಾಗುವಂತೆ ನಿವೃತ್ತಿ ಬಳಿಕವೂ ನ್ಯಾ. ಮೇರಿ ಜೋಸೆಫ್‌ ಹೈಕೋರ್ಟ್‌ನ ತಮ್ಮ ಚೇಂಬರ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ವಕೀಲರಾದ ಯಶವಂತ ಶೆಣೈ ವೈಯಕ್ತಿಕವಾಗಿ ಬರೆದ ಪತ್ರದಲ್ಲಿ ದೂರಿದ್ದಾರೆ.

ನ್ಯಾಯಮೂರ್ತಿಗಳು ಸಾಮಾನ್ಯವಾಗಿ ಒಂದು ತಿಂಗಳ ಕಾಲ ತಮ್ಮ ಕಚೇರಿಯಲ್ಲಿರಲು ಅವಕಾಶವಿದ್ದರೂ ಅವರು ವೈಯಕ್ತಿಕ ವಸ್ತುಗಳನ್ನು ತೆಗೆದುಕೊಂಡುಹೋಗಲು ಮಾತ್ರ ಆ ಅವಕಾಶ ಇದೆಯೇ ವಿನಾ ಆಡಳಿತ ಅಥವಾ ನ್ಯಾಯಾಂಗ ಕಾರ್ಯಗಳನ್ನು ಕೈಗೊಳ್ಳಲು ಅಲ್ಲ ಎಂದು ಶೆಣೈ ತಿಳಿಸಿದ್ದಾರೆ.

ಇದು ತೀರಾ ಅಸಮರ್ಪಕವಾದುದಾಗಿದ್ದು ನಿವೃತ್ತಿಯ 5 ತಿಂಗಳ ಬಳಿಕವೂ ಪ್ರಕರಣದ ಕಡತ ತಮ್ಮ ಬಳಿ ಇರಿಸಿಕೊಂಡಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸುಪ್ರೀಂ ಕೋರ್ಟ್‌ ಈಚೆಗೆ ಹರಿಹಾಯ್ದಿದ್ದನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಹೈಕೋರ್ಟ್‌ನ ಐ ಟಿ ಸಿಸ್ಟಂಗಳಿಗೆ ನ್ಯಾಯಮೂರ್ತಿ ಮೇರಿ ಅವರಿಗೆ ನೀಡಿರುವ ಪ್ರವೇಶಾವಕಾಶವನ್ನು ಈಗಲೂ ಸ್ಥಗಿತಗೊಳಿಸಿಲ್ಲ. ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು. ನ್ಯಾಯಮೂರ್ತಿ ಮೇರಿ ಮತ್ತು ಅವರ ಸಿಬ್ಬಂದಿ ನಡೆಸಿದ ಎಲ್ಲಾ ಚಟುವಟಿಕೆಗಳ ವರದಿಯನ್ನು ಸಂಗ್ರಹಿಸಲು ಐ ಟಿ ರಿಜಿಸ್ಟ್ರಾರ್‌ ಅವರಿಗೆ ಆದೇಶಿಸುವಂತೆ ಅವರು ಕೋರಿದ್ದಾರೆ. ಹಿಂದಿನ ದಿನಾಂಕದ ಮಾಹಿತಿ ಪ್ರಕಟಿಸುತ್ತಿರುವ ರಿಜಿಸ್ಟ್ರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಅವರು ಇದೇ ವೇಳೆ ಕೋರಿದ್ದಾರೆ.

ತಾವು ನಿರ್ದಿಷ್ಟ ಪ್ರಕರಣಗಳ ವೆಬ್ ಸ್ಟೇಟಸ್‌ ಡೌನ್‌ಲೋಡ್ ಮಾಡಿದ್ದು, ಜಸ್ಟಿಸ್ ಜೋಸೆಫ್ ಮತ್ತು ಅವರ ಸಿಬ್ಬಂದಿ ಏನಾದರೂ ಅಕ್ರಮ ಎಸಗಿದ್ದರೆ ಅದನ್ನು ಪತ್ತೆಹಚ್ಚಬಹುದು ಎಂದು ಅವರು ಹೇಳಿದ್ದಾರೆ.

ಶೆಣೈ ಮತ್ತು ನ್ಯಾ. ಮೇರಿ ಅವರ ನಡುವಿನ ವೃತ್ತಿಪರ ನಂಟು ಕೆಲ ಸಮಯದಿಂದ ವಿವಾದಕ್ಕೊಳಗಾಗಿದೆ. ವಿಚಾರಣೆ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ  2023ರಲ್ಲಿ ನ್ಯಾ. ಮೇರಿ ಅವರು ಶೆಣೈ ವಿರುದ್ಧ ಹೈಕೋರ್ಟ್‌ ಸಿಜೆ ಅವರಿಗೆ ದೂರು ನೀಡಿದ್ದರು. ಅದಾದ ಬಳಿಕ ಶೆಣೈ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿತ್ತು.

ಬೇರೆ ನ್ಯಾಯಮೂರ್ತಿಗಳಿಗೆ ಪ್ರತಿದಿನ 100ಕ್ಕೂ ಹೆಚ್ಚು ಪ್ರಕರಣಗಳನ್ನು ಪಟ್ಟಿ ಮಾಡುತ್ತಿದ್ದು ನ್ಯಾ. ಮೇರಿ ಅವರಿಗೆ ಕೇವಲ 20 ಪ್ರಕರಣಗಳ ವಿಚಾರಣೆ ನಡೆಸುವಂತೆ ಸೂಚಿಸಲಾಗುತ್ತಿದೆ ಎಂದು ದೂರಿ ಅದೇ ವರ್ಷ ಶೆಣೈ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಜಾಗೊಳಿಸಲಾಗಿದ್ದು ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಬಾಕಿ ಇದೆ.

Kannada Bar & Bench
kannada.barandbench.com