ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ವಿವಿಧ ವಕೀಲರು, ಸಂಘಗಳ ಖಂಡನೆ

ನಂತರ ಇ ಡಿ ಸಮನ್ಸ್ ಹಿಂಪಡೆದಿದೆಯಾದರೂ, ಈ ಘಟನೆ ವಕೀಲ-ಕಕ್ಷಿದಾರ ಸವಲತ್ತಿನ ಕುರಿತಂತೆ ತೀವ್ರ ಚರ್ಚೆಗೆ ನಾಂದಿ ಹಾಡಿದೆ.
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ವಿವಿಧ ವಕೀಲರು, ಸಂಘಗಳ ಖಂಡನೆ
Published on

ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದ್ದಕ್ಕಾಗಿ ದೇಶದ ವಿವಿಧ ವಕೀಲ ಸಂಘಟನೆಗಳು ಹಾಗೂ ನ್ಯಾಯವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ ಇ ಡಿ ಸಮನ್ಸ್ ಹಿಂಪಡೆದಿದೆಯಾದರೂ, ಈ ಘಟನೆ ವಕೀಲ-ಕಕ್ಷಿದಾರ ಸವಲತ್ತಿನ ಕುರಿತಂತೆ ತೀವ್ರ ಚರ್ಚೆಗೆ ನಾಂದಿ ಹಾಡಿದ್ದು 1872ರ ಭಾರತೀಯ ಸಾಕ್ಷ್ಯ ಕಾಯಿದೆಯಡಿ ವಕೀಲರಿಗೆ ಇರುವ ರಕ್ಷಣೆಗಳತ್ತ ಗಮನ ಸೆಳೆದಿದೆ.

Also Read
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ಎಸ್‌ಸಿಎಒಆರ್‌ಎ ತೀವ್ರ ಖಂಡನೆ

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಜಾರಿ ನಿರ್ದೇಶನಾಲಯದ ಕ್ರಮದ ಪರಿಣಾಮಗಳ ಬಗ್ಗೆ ಕಟುವಾದ ಎಚ್ಚರಿಕೆ ನೀಡಿದ್ದಾರೆ. ಇ ಡಿಯ ಕ್ರಮ ನ್ಯಾಯಾಂಗ ಸ್ವಾತಂತ್ರ್ಯದ ಮೂಲಕ್ಕೇ ಕೊಡಲಿ ಪೆಟ್ಟ ನೀಡಿದೆ. ವಕೀಲರನ್ನೇ ಆರೋಪಿಗಳನ್ನಾಗಿಸಲು ಇ ಡಿಗೆ ಅವಕಾಶ ನೀಡಿದರೆ ನ್ಯಾಯಾಧೀಶರನ್ನೇ ಆರೋಪಿಗಳನ್ನಾಗಿ ಮಾಡುವ ದಿನ ದೂರ ಇರುವುದಿಲ್ಲ ಎಂದಿದ್ದಾರೆ.

ಹಿರಿಯ ವಕೀಲ ಸಂಜಯ್ ಘೋಷ್ ಅವರು ಸಮನ್ಸ್  ನೀಡಿರುವುದನ್ನು ಕಾನೂನಾತ್ಮಕ ಆಡಳಿತದ ಮೇಲೆ ಈ ಹಿಂದೆಂದೂ ನಡೆದಿರದ ದಾಳಿ ಎಂದಿದ್ದಾರೆ.

ಇತ್ತ ಜೂನ್ 17ರಂದು ಅಂಗೀಕರಿಸಿದ ನಿರ್ಣಯದಲ್ಲಿ ದೆಹಲಿ ಹೈಕೋರ್ಟ್ ವಕೀಲರ ಸಂಘ “ಇಂತಹ ಯತ್ನಗಳು ವೃತ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಲ್ಲದೆ ತನಗೆ ಬೇಕಾದ ವಕೀಲರನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ನ್ಯಾಯಯುತ ವಿಚಾರಣೆ ಪಡೆಯುವ ಸಾಂವಿಧಾನಿಕ ಹಕ್ಕುಗಳಿಗೂ ಗಂಭೀರ ಉಂಟು ಮಾಡಿದೆ ಎಂದು ಹೇಳಿದೆ.

ಅದೇ ದಿನ ಗುಜರಾತ್ ಹೈಕೋರ್ಟ್ ವಕೀಲರ ಸಂಘ ಕೈಗೊಂಡ ನಿರ್ಣಯ ಕೂಡ ಇ ಡಿ ನಡೆಯನ್ನು ಸರ್ವಾನುಮತದಿಂದ ಖಂಡಿಸಿದೆ.

Also Read
ಕೇರ್ ಹೆಲ್ತ್ ಇಎಸ್ಒಪಿ ತನಿಖೆ: ಹಿರಿಯ ವಕೀಲ ದಾತಾರ್ ಅವರಿಗೆ ನೀಡಲಾಗಿದ್ದ ಸಮನ್ಸ್ ಹಿಂಪಡೆದ ಇ ಡಿ

ಮತ್ತೊಂದೆಡೆ ಹಿರಿಯ ನ್ಯಾಯವಾದಿ ಮತ್ತು ಡಿಎಂಕೆ ಸಂಸದ ಪಿ. ವಿಲ್ಸನ್ ಕೂಡ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದೇನು? ಜಾರಿ ನಿರ್ದೇಶನಾಲಯ ಆರೋಪಿಸಿರುವ ವ್ಯಕ್ತಿಗಳನ್ನು ಖುಲಾಸೆಗೊಳಿಸುವ ನ್ಯಾಯಾಧೀಶರಿಗೆ ಸಮನ್ಸ್ ನೀಡಲಾಗುತ್ತದೆಯೇ? ಆರೋಪಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸಮನ್ಸ್ ಕೊಡಲಾಗುತ್ತದೆಯೇ? ಇದು ಪ್ರಜಾಪ್ರಭುತ್ವವಲ್ಲ ಸರ್ವಾಧಿಕಾರಿ ಆಡಳಿತದ ಅನನ್ಯ ಲಕ್ಷಣ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ಕೂಡ ಇ ಡಿ ಕ್ರಮಕ್ಕೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿತ್ತು. ಇ ಡಿಯ ಕ್ರಮ ಅನಗತ್ಯವಾಗಿದ್ದು ಕಾನೂನು ವೃತ್ತಿ ಮೇಲೆ ಪರಿಣಾಮ ಬೀರುವ ತನಿಖಾ ಅತಿಕ್ರಮಣ ಎಂದು ಅದು ಜೂನ್ 16ರಂದು ನೀಡಿದ ಹೇಳಿಕೆಯಲ್ಲಿ ವಿವರಿಸಿತ್ತು.

Kannada Bar & Bench
kannada.barandbench.com