ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಮೃತ್ಯುಂಜಯ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಎಫ್‌ಐಆರ್ ಮತ್ತು ಮೃತ ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿಲ್ಲ. ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ರೀತಿ ನೇರ ಸಂಬಂಧವಿಲ್ಲ. ಆದ್ದರಿಂದ, ಅವರಿಗೆ ಜಾಮೀನು ನೀಡಬೇಕು.
Basavalinga Swamiji
Basavalinga Swamiji

ರಾಮನಗರ ಜಿಲ್ಲೆ ಕಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್‌ ಮಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಮಾಗಡಿ ತಾಲ್ಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಅಲಿಯಾಸ್‌ ರೇಣುಕಾರಾಧ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾದ ಮೃತ್ಯುಂಜಯ ಸ್ವಾಮೀಜಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಪೀಠವು ಪುರಸ್ಕರಿಸಿದೆ.

ಮೃತ್ಯುಂಜಯ ಸ್ವಾಮೀಜಿ ಪರ ವಕೀಲರು “ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಮೃತ ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿಲ್ಲ. ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ರೀತಿ ನೇರ ಸಂಬಂಧವಿಲ್ಲ. ಆದ್ದರಿಂದ, ಅವರಿಗೆ ಜಾಮೀನು ನೀಡಬೇಕು” ಎಂದು ಕೋರಿದರು.

ಈ ವಾದ ಪರಿಗಣಿಸಿದ ಪೀಠವು ಅರ್ಜಿದಾರರಿಗೆ ಜಾಮೀನು ನೀಡಿ ಆದೇಶಿಸಿದೆ. ಈಚೆಗೆ ಮೂರನೇ ಆರೋಪಿ ವಕೀಲ ಎಂ ಮಹದೇವಯ್ಯ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಪ್ರಕರಣದ ಹಿನ್ನೆಲೆ: ಬಸವಲಿಂಗ ಸ್ವಾಮೀಜಿ ಬಂಡೆಮಠದ ತಮ್ಮ ಕೊಠಡಿಯಲ್ಲಿ 2022ರ ಅಕ್ಟೋಬರ್‌ 23ರಂದು ರಾತ್ರಿ ಕಿಟಕಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು. ಮರು ದಿನ ಅಕ್ಟೋಬರ್‌ 24ರ ಬೆಳಿಗ್ಗೆ 7 ಗಂಟೆಗೆ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಠಾಣಾ ಪೊಲೀಸರು, ಮೃತ ಸ್ವಾಮೀಜಿಯ ಮರಣ ಪತ್ರ ಆಧರಿಸಿ ರೇಣುಕಾರಾಧ್ಯ (ಮೃತ್ಯುಂಜಯ ಸ್ವಾಮಿ), ಜೆ ಚಂದು ಅಲಿಯಾಸ್ ನೀಲಾಂಬಿಕೆ, ವಕೀಲ ಎಂ ಮಹದೇವಯ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಬಿ.ಸಿ. ಸುರೇಶ್ ಅವರನ್ನು ಬಂಧಿಸಿದ್ದರು.

Also Read
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಕೀಲ ಮಹದೇವಯ್ಯಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಒಳಸಂಚು ರೂಪಿಸಿದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿತ್ತು. 2022ರ ಅಕ್ಟೋಬರ್‌ 30ರಿಂದ ನ್ಯಾಯಾಂಗ ಬಂಧನದಲ್ಲಿರುವ ಮೃತ್ಯುಂಜಯ ಸ್ವಾಮೀಜಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com