ಪತ್ನಿ-ಮಗು ನೋಡಲು ಸೀಮಿತ ಅವಧಿಗೆ ಬಸವರಾಜ್ ಕನ್ನಾಳೆಯಿಂದ ಜಾಮೀನು ಕೋರಿಕೆ: ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

“ಕನ್ನಾಳೆ ನಂಬಿಕೆಗೆ ಅರ್ಹನಲ್ಲ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಕನ್ನಾಳೆಗೆ ಕಜಾಕಿಸ್ತಾನದಲ್ಲಿ ಕೆಲಸವೇನು ಇರಲಿಲ್ಲ. ಅಲ್ಲಿಗೆ ಏಕೆ ಓಡಿ ಹೋಗಲು ಮುಂದಾಗಿದ್ದ?” ಎಂದು ಪ್ರಶ್ನಿಸಿದ ಎಸ್‌ಪಿಪಿ.
ಪತ್ನಿ-ಮಗು ನೋಡಲು ಸೀಮಿತ ಅವಧಿಗೆ ಬಸವರಾಜ್ ಕನ್ನಾಳೆಯಿಂದ ಜಾಮೀನು ಕೋರಿಕೆ: ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್‌
Published on: 

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಸವರಾಜ್‌ ಕನ್ನಾಳೆಯ ಪತ್ನಿಯು ಹೆಣ್ಣು ಮಗುವಿಗೆ ಇಂದು ಜನ್ಮ ನೀಡಿರುವುದರಿಂದ ಅವರನ್ನು ನೋಡಲು ತವರು ಬೀದರ್‌ಗೆ ಹೋಗಲು ಮಾನವೀಯತೆಯ ಆಧಾರದಲ್ಲಿ ಸೀಮಿತ ಅವಧಿಗೆ ಜಾಮೀನು ನೀಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನಾಳೆಗೆ ಮುಂದೂಡಿದೆ.

ಕನ್ನಾಳೆ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

Justice S Vishwajith Shetty
Justice S Vishwajith Shetty

ವಿಚಾರಣೆಯ ವೇಳೆ ಪೀಠವು “ಕನ್ನಾಳೆ ಓಡಿ ಹೋಗಬೇಕು ಎಂದು ಹೋಗಿದ್ದನೋ ಅಥವಾ ಯಾವ ಕಾರಣಕ್ಕಾಗಿ ಹೋಗಿದ್ದನೋ ನಮಗೆ ಗೊತ್ತಿಲ್ಲ. ಎಲ್ಲವನ್ನೂ ಬಹಿರಂಗಪಡಿಸಲಾಗದು. ಈಗ ಜನಿಸಿರುವ ಮಗುವಿನ ಜೊತೆಗೆ ಆತನಿಗೆ ಇನ್ನೂ ಎರಡು ಸಣ್ಣ ಮಕ್ಕಳು ಇದಾವಲ್ಲ. ಆತನ ಪಾಸ್‌ಪೋರ್ಟ್‌ ಜಫ್ತಿ ಮಾಡಿಲ್ಲವೇ? ಪ್ರತಿದಿನ ಸಮೀಪದ ಪೊಲೀಸ್‌ ಠಾಣೆಯಲ್ಲಿ ಹಾಜರಿ ಹಾಕಬೇಕು ಎಂಬ ಷರತ್ತು ವಿಧಿಸೋಣ. ದೇಶದಿಂದ ಹೋಗಿ ವಾಪಸ್‌ ಟಿಕೆಟ್‌ ಬುಕ್‌ ಮಾಡಿಲ್ಲ ಎಂದ ಮಾತ್ರಕ್ಕೆ ಆತ ವಾಪಸ್‌ ಬರುವುದಿಲ್ಲ ಎಂದಲ್ಲ. ಇಂಥ ಪ್ರಕರಣಗಳಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ಕೊಲೆ ಮತ್ತು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳಲ್ಲಿನ ಆರೋಪಿಗಳಿಗೂ ಇದೇ ನ್ಯಾಯಾಲಯವು ಮಾನವೀಯತೆಯ ಆಧಾರದಲ್ಲಿ ಸ್ಪಂದಿಸಿದೆ” ಎಂದಿತು.

ಈ ವೇಳೆ, ಕನ್ನಾಳೆ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರು “ಕನ್ನಾಳೆ ಪತ್ನಿಗೆ ಇಂದು ಹೆಣ್ಣು ಮಗು ಜನಿಸಿದೆ. ಇದಕ್ಕಾಗಿ ಸೀಮಿತ ಅವಧಿಗೆ ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬೇಕು. ಈ ಸಂಬಂಧ ದಾಖಲೆ ಸಲ್ಲಿಸಲಾಗುವುದು. ಮೆರಿಟ್‌ ಮೇಲೆ ಜಾಮೀನು ಕೋರುತ್ತಿಲ್ಲ. ಕನ್ನಾಳೆ ಪೋಷಕರಿಗೆ ವಯಸ್ಸಾಗಿದೆ. ಮಾನವೀಯತೆಯ ಆಧಾರದಲ್ಲಿ ಜಾಮೀನು ಕೋರುತ್ತಿದ್ದೇವೆ. ಇದು ಮೂಲಭೂತ ಹಕ್ಕಾಗಿದ್ದು, ಇದಕ್ಕೆ ಸಂಬಂಧಿಸಿದ ತೀರ್ಪುಗಳು ಬಂದಿವೆ" ಎಂದರು.

Senior Advocate Aruna Shyam
Senior Advocate Aruna Shyam

"ಯಾವುದೇ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದು. ಕಜಕಿಸ್ತಾನ ಟೂರ್‌ ಪ್ಯಾಕೇಜ್‌ನಲ್ಲಿ ಮೊದಲೇ ಪ್ರವಾಸಕ್ಕೆ ಕನ್ನಾಳೆ ಟಿಕೆಟ್‌ ಬುಕ್‌ ಮಾಡಿದ್ದರು. ವಾಪಸ್‌ ಬರುವ ಸಂಬಂಧಿತ ಟಿಕೆಟ್‌ ಅನ್ನೂ ಸಹ ಹಾಜರುಪಡಿಸಲಾಗುವುದು” ಎಂದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕನ್ನಾಳೆ ದೇಶ ತೊರೆಯಲು ಮುಂದಾಗಿದ್ದನು. ವಾಪಸ್‌ ಆಗುವ ಟಿಕೆಟ್‌ ಕಾಯ್ದಿರಿಸದೇ ದೇಶ ಬಿಡಲು ಮುಂದಾಗಿದ್ದ ಆತನನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ದೇಶ ಬಿಟ್ಟು ಹೋಗಲು ಮುಂದಾಗಿದ್ದ ಕನ್ನಾಳೆ, ಇಂದು ತನ್ನ ಪತ್ನಿಯನ್ನು ನೋಡಬೇಕಿದೆ. ಯಾಕೆ ದೇಶ ಬಿಟ್ಟು ಹೋಗಲು ಮುಂದಾಗಿದ್ದ ಎಂಬುದನ್ನು ಕನ್ನಾಳೆ ಬಹಿರಂಗಪಡಿಸಬೇಕು" ಎಂದರು.

SPP B N Jagadeesha
SPP B N Jagadeesha

"ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬಹುದು ನಿಜ. ಆದರೆ, ಕನ್ನಾಳೆಗೆ ಅಲ್ಲ. ನಾವೇ ಆತ ಹೋಗಿ ಮಗು ನೋಡಿ ಬರುವುದಕ್ಕೆ ಅವಕಾಶ ಮಾಡುತ್ತೇವೆ. ಕನ್ನಾಳೆ ಪತ್ನಿಗೆ ಸಹೋದರಿ, ಸಹೋದರ ಮತ್ತು ಅವರ ಪೋಷಕರು ಇದ್ದಾರೆ. ಅವರೆಲ್ಲರೂ ಬೀದರ್‌ನಲ್ಲಿದ್ದಾರೆ. ಆರೋಪಿ ಕನ್ನಾಳೆಯ ಪೋಸ್‌ಪೋರ್ಟ್‌ ಜಫ್ತಿ ಅಧಿಕಾರ ನಮಗಿಲ್ಲ. ಆತ ನಂಬಿಕೆಗೆ ಅರ್ಹನಲ್ಲ ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಕನ್ನಾಳೆಗೆ ಕಜಾಕಿಸ್ತಾನದಲ್ಲಿ ಕೆಲಸವೇನು ಇರಲಿಲ್ಲ. ಅಲ್ಲಿಗೆ ಏಕೆ ಓಡಿ ಹೋಗಲು ಮುಂದಾಗಿದ್ದ? ೨೦೨೬ರ ಆಗಸ್ಟ್‌ನಿಂದ ಕನ್ನಾಳೆಯ ಪತ್ನಿಯು ಆಕೆಯ ಪೋಷಕರ ಜೊತೆ ಇದ್ದಾರೆ ಎಂದು ಆತನೇ ಅರ್ಜಿಯಲ್ಲಿ ಹೇಳಿದ್ದಾನೆ” ಎಂದರು.

ಎಸ್‌ಪಿಪಿ ಜಗದೀಶ್‌ ಅವರ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಪೀಠವು ನಾಳೆಗೆ ಮುಂದೂಡಿತು.

ಕೆಪಿಎಸ್‌ಸಿ ಪರ ಹಿರಿಯ ವಕೀಲ ರೊಬೆನ್‌ ಜಾಕಬ್‌ ಅವರು “ಕೆಪಿಎಸ್‌ಸಿಯು ಮುಚ್ಚಿದ ಲಕೋಟೆಯಲ್ಲಿ ಒಂಭತ್ತು ಅಭ್ಯರ್ಥಿಗಳಿಗೆ ಶಾಂತಾ ಹೊಸಮನಿ ಒಳಗೊಂಡ ಮೂವರು ಸದಸ್ಯರ ಸಮಿತಿಯು ನೀಡಿರುವ ಅಂಕಗಳ ದಾಖಲೆಯನ್ನು ಒದಗಿಸಿದೆ” ಎಂದರು. ಇದಕ್ಕೆ ಪೀಠವು ಮುಂದಿನ ವಿಚಾರಣೆಯ ದಿನದಂದು ಅದನ್ನು ತನ್ನಿ. ಈಗ ನಿಮ್ಮ ಬಳಿಯೇ ಅದು ಇರಲಿ ಎಂದಿತು.

ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಮತ್ತು ಅಮಾನತುಗೊಂಡಿರುವ ಬಂಧಿತ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಜಾಮೀನು ಅರ್ಜಿಗಳ ವಿಚಾರಣೆಯನ್ನು ಪೀಠವು ಇದೇ ವೇಳೆ ಮುಂದಿನ ವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com