
“ರಾಜಕಾರಣಿಯೊಬ್ಬರ ಹತ್ತಿರ ನೀನು ನನಗೆ ₹15 ಕೋಟಿ ಕೊಡಿಸಿದರೆ ನಾನು ಮಾಫಿ ಸಾಕ್ಷಿ ಆಗುತ್ತೇನೆ. ಕಾಂಗ್ರೆಸ್ ವಿನಯ ಕುಲಕರ್ಣಿಯ ರಾಜಕೀಯ ಭವಿಷ್ಯ ಮುಗಿಸಿ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸುತ್ತೇನೆ. ಹೀಗೆಂದು ಬಸವರಾಜ ಮುತ್ತಗಿ ಉದ್ಯಮಿ ಐಶ್ವರ್ಯಾ ಗೌಡ ಅವರಿಗೆ ಮಾತು ಕೊಟ್ಟಿದ್ದಾರೆ” ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದರು.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಿ ವಿನಯ ಕುಲಕರ್ಣಿ, ದಿನೇಶ್, ಅಶ್ವತ್ಥ್ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ “ನೀನು ನನಗೆ ರಾಜಕಾರಣಿಯೊಬ್ಬರ ಹತ್ತಿರ ₹15 ಕೋಟಿ ಕೊಡಿಸು. ಅವರಿಗೂ ಅನುಕೂಲ ಆಗುವಂತೆ ಮಾಫಿ ಸಾಕ್ಷಿಯಾಗಿ ವಿನಯ ಕುಲಕರ್ಣಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುತ್ತೇನೆ ಎಂದು ಬಸವರಾಜ ಮುತ್ತಗಿಯು, ಐಶ್ವರ್ಯಾ ಗೌಡ ಜೊತೆಗೆ ನಡೆಸಿರುವ ಮಾತುಕತೆಯ ಪೆನ್ ಡ್ರೈವ್ ನಮ್ಮ ಬಳಿ ಇದೆ” ಎಂದು ಅದನ್ನು ಪೀಠಕ್ಕೆ ಸಲ್ಲಿಸಿದರು.
ಇದನ್ನು ಅಲ್ಲಗಳೆದ ಮುತ್ತಗಿ ಪರ ವಕೀಲ ನಾಗೇಂದ್ರ ನಾಯಕ್ ಅವರು “ಉದ್ಯಮಿ ಐಶ್ವರ್ಯ ಗೌಡ ಅವರು ವಿನಯ ಕುಲಕರ್ಣಿಗೆ ₹40 ಕೋಟಿ ಕೊಡಬೇಕು. ಅದನ್ನು ವಸೂಲಿ ಮಾಡುವ ಕೆಲಸವನ್ನು ಬಸವರಾಜ ಮುತ್ತಗಿಗೆ ವಹಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಮಾತುಕತೆ ಆಗಿದೆಯೇ ಹೊರತು, ಮಾಫಿ ಸಾಕ್ಷಿ ಸಂಬಂಧ ಇಲ್ಲ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಪೆನ್ ಡ್ರೈವ್ ಕೂಡಾ ಇದೆ” ಎಂದು ಪ್ರತಿಪಾದಿಸಿದರು.
ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಆರೋಪಿಗಳ ಪರ ಪದಾಂಕಿತ ಹಿರಿಯ ವಕೀಲರಾದ ಸಂದೇಶ್ ಜೆ.ಚೌಟ, ಎಂ.ಎಸ್.ಶ್ಯಾಮ್‌ಸುಂದರ್, ವಿನಯ ಕುಲಕರ್ಣಿ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಎಸ್ ಸುನಿಲ್ ಕುಮಾರ್ ಮತ್ತು ದಿನೇಶ್ ಹಾಗೂ ಅಶ್ವತ್ಥ್ ಪರ ಜಿ ಲಕ್ಷ್ಮಿಕಾಂತ ಇದ್ದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು ಮಾರ್ಚ್ 11ರಂದು ಮುಂದುವರಿಸಲಿದೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಬಸವರಾಜ ಮುತ್ತಗಿಯೇ ಹತ್ಯೆಯ ಪ್ರಮುಖ ಆರೋಪಿ. ಹತ್ಯೆ ನಡೆಸಲು ಬೆಂಗಳೂರಿನಿಂದ ಹುಡುಗರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದೇ ಬಸವರಾಜ ಮುತ್ತಗಿ ಎಂಬುದು ಸಿಬಿಐ ಪ್ರತಿಪಾದಿಸಿದೆ.
ಐಶ್ವರ್ಯ ಗೌಡ ಕೂಡ ಹಲವರಿಗೆ ಚಿನ್ನ ವಂಚನೆ ಮಾಡಿರುವ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.