ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ರಾಜ್ಯದ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯವಿಲ್ಲ. ಮಕ್ಕಳು ಅಭ್ಯಸಿಸಲು ಸೂಕ್ತ ವಾತಾವರಣ ಇಲ್ಲ. ಕೋಣೆಗಳು ಕಿರಿದಾಗಿವೆ. ಪೌಷ್ಠಿಕಾಂಶ ಆಹಾರ ದೊರೆಯುತ್ತಿಲ್ಲ. ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವುದು ಅರ್ಜಿದಾರರ ಆಕ್ಷೇಪಣೆ
Karnataka High Court
Karnataka High Court

ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಸಂತೋಷ್ ಕಾಲೊನಿ ನಿವಾಸಿ ಗುರುನಾಥ ವದ್ದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಬಡ ಮಕ್ಕಳ ಅಪೌಷ್ಠಿಕತೆ ನಿವಾರಿಸುವ ಮತ್ತು ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕೇಂದ್ರ ಆರಂಭಿಸಿದೆ. ಆದರೆ, ಬೀದರ್ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯವಿಲ್ಲ. ಮಕ್ಕಳು ಅಭ್ಯಸಿಸಲು ಸೂಕ್ತ ವಾತಾವರಣ ಇಲ್ಲ. ಕೋಣೆಗಳು ಕಿರಿದಾಗಿವೆ. ಪೌಷ್ಠಿಕಾಂಶ ಆಹಾರ ದೊರೆಯುತ್ತಿಲ್ಲ. ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ವಿದ್ಯುತ್ ಸಂಪರ್ಕ ಹಾಗೂ ಫ್ಯಾನ್ ಸೌಲಭ್ಯವಿಲ್ಲ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಈ ಕುರಿತು ಬೀದರ್ ಜಿಲ್ಲಾ ಪ್ರಧಾನ ಮತ್ತು ಸತ್ತ್ರ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ರಾಜ್ಯಕ್ಕೆ ಹೆಚ್ಚುವರಿ ಅಂಗನವಾಡಿ ಮಂಜೂರಾತಿಗೆ ಕೈಗೊಂಡ ಕ್ರಮಗಳ ಮಾಹಿತಿ ನೀಡಲು ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

ಅಂಗನವಾಡಿ ಮಕ್ಕಳಿಗೆ ನೀಡಬೇಕಿರುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರೇ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಪೌಷ್ಠಿಕ ಆಹಾರ ಉತ್ಪಾದನಾ ಘಟಕಗಳಲ್ಲಿ ಕಳಪೆ ಆಹಾರ ಉತ್ಪಾದಿಸಲಾಗುತ್ತಿದೆ. ಮತ್ತೊಂದೆಡೆ ಅಂಗನವಾಡಿ ಕೇಂದ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಒದಗಿಸಬೇಕು. ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಬಯೋಮೆಟ್ರಿಕ್ ಮತ್ತು ಸಿಸಿಟಿವಿ ಆಳವಡಿಸಬೇಕು. ಆ ಮೂಲಕ ವ್ಯವಸ್ಥೆ ಸುಧಾರಿಸಬೇಕು ಹಾಗೂ ಭ್ರಷ್ಟಾಚಾರ ನಿಯಂತ್ರಿಸಬೇಕು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳೆದ ಏಪ್ರಿಲ್‌ನಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ. ಆ ಮನವಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com