

“ಪ್ರಜೆಗಳ ಹಿತಾಸಕ್ತಿಯೇ ಸಂವಿಧಾನದ ಕೇಂದ್ರಬಿಂದುವಾಗಿದ್ದು, ಪ್ರಜೆಗಳಿಗೆ ಸಾಮಾಜಿಕ-ಆರ್ಥಿಕ ನ್ಯಾಯ ಖಾತರಿಪಡಿಸುವ ಮತ್ತು ಭಾರತವನ್ನು ಕಲ್ಯಾಣ ದೇಶವಾಗಿ ರೂಪಿಸುವುದೇ ಅದರ ಮೂಲಧ್ಯೇಯ” ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಬೆಂಗಳೂರಿನ ಹೈಕೋರ್ಟ್ ಕಟ್ಟಡದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.
“ಮೂಲಭೂತ ಹಕ್ಕಗಳು ಭಾರತದ ಸಂವಿಧಾನದ ಅನಿವಾರ್ಯ ಮತ್ತು ಅತ್ಯಗತ್ಯ ಭಾಗವಾಗಿದೆ. ಅದು ಭಾರತೀಯರ ಹಕ್ಕುಗಳು ಮತ್ತು ಸ್ವಾತಂತ್ರ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪ್ರಜೆಗಳಿಗೆ ಸಾಮಾಜಿಕ-ಆರ್ಥಿಕ ನ್ಯಾಯ ಖಾತರಿಪಡಿಸುವುದು ಹಾಗೂ ಭಾರತವನ್ನು ಕಲ್ಯಾಣ ದೇಶವಾಗಿ ರೂಪಿಸುವುದೇ ಸಂವಿಧಾನದ ಧ್ಯೇಯೋದ್ದೇಶವಾಗಿದೆ. ಆ ಮೂಲಭೂತ ಹಕ್ಕನ್ನು ಯಾವುದೇ ಕಾನೂನು ಉಲ್ಲಂಘಿಸಿದರೆ, ಅದನ್ನು ಅನೂರ್ಜಿತಗೊಳಿಸುವ ಅವಕಾಶವನ್ನು ಸಂವಿಧಾನದ 13ನೇ ವಿಧಿ ಖಾತರಿಪಡಿಸುತ್ತದೆ ಎಂದು ತಿಳಿಸಿದರು.
ಸಂವಿಧಾನದ ನಾಲ್ಕನೇ ಭಾಗವು ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಹೇಳುತ್ತದೆ. ಅದು ಆಡಳಿತ ತತ್ವದ ರೂಪರೇಖೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಸಂವಿಧಾನದ 38 ಹಾಗೂ 39ನೇ ವಿಧಿಗಳು ಸಾಮಾಜಿಕ-ಆರ್ಥಿಕ ನ್ಯಾಯವನ್ನು ಖಾತರಪಡಿಸುವುದರ ಜೊತೆಗೆ ಜನರ ಕಲ್ಯಾಣ, ಜೀವನಾಧಾರ, ಆರೋಗ್ಯವನ್ನು ಪ್ರಚುರಪಡಿಸುತ್ತದೆ. 39ಎ ವಿಧಿಯು ಬಡವರಿಗೆ ಉಚಿತ ಕಾನೂನು ನೆರವನ್ನು ಖಾತರಿಪಡಿಸುತ್ತದೆ. ಜನರಲ್ಲಿ ಸಮಾನತೆ ತರುವುದು, ಅವರ ಸಾಂಸ್ಕೃತಿ, ಶೈಕ್ಷಣಿಕ ಹಕ್ಕು, ಭಾಷಾ, ಧಾರ್ಮಿಕ ಹಿತಾಸಕ್ತಿ ಕಾಪಾಡುವುದು, ಬಡವರಿಗೆ ಉಚಿತ ಕಾನೂನು ನೆರವು ಖಾತರಿಪಡಿಸುವುದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಆದ್ಯ ಧ್ಯೇಯ ಹಾಗೂ ಕರ್ತವ್ಯ. ಅದು ಸಫಲವಾಗಬೇಕಾದರೆ ಪ್ರಾಧಿಕಾರ ಮಾತ್ರವಲ್ಲದೆ ಸಮಾಜದ ಭಾಗವಹಿಸುವಿಕೆ ಅತ್ಯಗತ್ಯ ಎಂದು ತಿಳಿಸಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು “ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಎಲ್ಲರೂ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಹಕ್ಕುಗಳಿಗಾಗಿ ಯಾರೂ ಸಹ ಯಾರ ಬಳಿ ಮೊರೆಯಿಡುವ ಪರಿಸ್ಥಿತಿ ಸೃಷ್ಟಿಯಾಗುವುದಿಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ದೇಶದ ಜನರ ಸ್ವಾತಂತ್ರ್ಯ, ಹಕ್ಕು, ವಿವೇಚನೆ, ಬುದ್ಧಿವಂತಿಕೆ ಮತ್ತು ತ್ಯಾಗವನ್ನು ಸಂವಿಧಾನದ ದಿನವು ನೆನಪಿಸುತ್ತದೆ” ಎಂದರು.
“ಪ್ರತಿಯೊಬ್ಬರು ಮೊದಲಿಗೆ ಖರೀದಿಸಬೇಕಾದ ಪುಸ್ತಕ ಎಂದರೆ ಸಂವಿಧಾನದ ಪುಸ್ತಕ. ಅದು ಪುಸ್ತಕ ಮಳಿಗೆಯಲ್ಲಿ ಅತ್ಯಂತ ಕಡಿಮೆಗೆ ದೊರೆಯುತ್ತದೆ. ಎಲ್ಲಾ ವಕೀಲರು, ನ್ಯಾಯಾಂಗ ಅಧಿಕಾರಿಗಳು ಸಾಂವಿಧಾನಿಕ ಚರ್ಚೆಗಳನ್ನು ನಿತ್ಯ ಓದಬೇಕು. ಇದರಿಂದ ಆ ಚರ್ಚೆಗಳಲ್ಲಿರುವ ಅಂಶಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುಪಡಿಸಲು ಸಾಧ್ಯವಾಗುತ್ತದೆ. ನಮ್ಮದು ಜೀವಂತ ಸಂವಿಧಾನ. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಬೋಧಿಸುವ ಸಂವಿಧಾನವು ಎಲ್ಲಾವನ್ನು ಪ್ರಸ್ತುತಪಡಿಸುತ್ತದೆ ಮತ್ತು ಒಳಗೊಳ್ಳುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಕೆ ಎಸ್ ಮುದಗಲ್, ರಾಜ್ಯ ಅಡ್ವೋಕೇಟ್ ಜನರಲ್ ಕೆ ಶಿಶಿಕಿರಣ್, ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್, ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ವಿ ಡಿ ಕಾಮರಡ್ಡಿ ಉಪಸ್ಥಿತರಿದ್ದರು.