ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಒಳಗಿನಿಂದಲೇ ಬೆದರಿಕೆ, ವಕೀಲರ ಸಂಘ ವಿಭಜನೆ; ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್

ಲೆಕ್ಸ್ ಮ್ಯಾಕುಲಾ ಸಂಸ್ಥೆ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದ ವೇಳೆ, ʼ21 ನೇ ಶತಮಾನದಲ್ಲಿ ಸಾಂವಿಧಾನಿಕ ಮೌಲ್ಯಗಳ ಮಹತ್ವʼ ಎಂಬ ವಿಷಯದ ಕುರಿತು ನ್ಯಾ. ಕುರಿಯನ್ ಮಾತನಾಡಿದರು.
Former Supreme Court Judge, Justice Kurian Joseph
Former Supreme Court Judge, Justice Kurian Joseph

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ನ್ಯಾಯಾಂಗದ ಒಳಗಿನಿಂದಲೂ ಬೆದರಿಕೆಗಳಿವೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಕಳವಳ ವ್ಯಕ್ತಪಡಿಸಿದರು. ಲೆಕ್ಸ್ ಮಕುಲಾ (Lex Macula) ಸಂಸ್ಥೆ ಭಾನುವಾರ ಆಯೋಜಿಸಿದ್ದ ವರ್ಚುವಲ್‌ ಕಾರ್ಯಕ್ರಮದ ವೇಳೆ ʼ21ನೇ ಶತಮಾನದಲ್ಲಿ ಸಾಂವಿಧಾನಿಕ ಮೌಲ್ಯಗಳ ಮಹತ್ವʼ ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ತೋರುವ ಅಗತ್ಯ ಇದೆ” ಎಂದು ಹೇಳಿದರು.

“ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನ ವಿವಿಧ ವಕೀಲರ ಸಂಘಗಳನ್ನು ರಾಜಕೀಯ ಮತ್ತು ಕೋಮುವಾದಿ ನೆಲೆಯಲ್ಲಿ ವಿಭಜಿಸಲಾಗಿದೆ. ಇದರಿಂದ (ಸಂವಿಧಾನದ) ನೈಜ ಕಾವಲುಗಾರರು ತಮ್ಮ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ,” ಎಂದು ಅವರು ಅಭಿಪ್ರಾಯಪಟ್ಟರು.

“ಸಾಂವಿಧಾನಿಕವಾಗಿ ತಪ್ಪುಗಳಾದಾಗ ಸದಾ ಧ್ವನಿ ಎತ್ತುತ್ತಿದ್ದವರು ವಕೀಲರು. ಈಗ ಅವರು ಎಲ್ಲಿದ್ದಾರೆ? ಅವರು ಕೂಡ ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯವಾಗಿ, ಕೋಮು ನೆಲೆಯಲ್ಲಿ ವಿಭಜಿತರಾಗಿದ್ದಾರೆ” ಎಂದು ಅವರು ಹೇಳಿದರು. “ವಕೀಲರ ಸಂಘಗಳು ತಮ್ಮ ನೈತಿಕ ಶಕ್ತಿ ಕಳೆದುಕೊಳ್ಳುತ್ತಿವೆ. ಕಾವಲುಗಾರನಾಗಿರುವುದೇ ಅದರ ನೈಜ ಶಕ್ತಿ,” ಎಂದು ಅವರು ಹೇಳಿದರು.

ಸಂವಿಧಾನದ ಮೂಲ ರಚನೆ ಸಂಸತ್ತಿನ ತಿದ್ದುಪಡಿ ಅಧಿಕಾರವನ್ನುಮೀರಿದೆ ಎಂದ ನ್ಯಾ. ಕುರಿಯನ್‌ ಸಂವಿಧಾನ ಮತ್ತು ದೇಶವು ಸಾರ್ವಭೌಮತ್ವ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಭಾರತದ ಗಣರಾಜ್ಯದ ಸ್ವರೂಪ ಎನ್ನುವ ಐದು ಸ್ತಂಭಗಳ ಮೇಲೆ ನಿರ್ಮಿತವಾಗಿದೆ. ಹಾಗಾಗಿ ಅದಕ್ಕೆ ಸೋಲುಂಟಾಗುವಂತೆ ಅದರ ಯಾವುದೇ ಭಾಗವನ್ನು ತೆಗೆದು ಹಾಕಲು ಅಥವಾ ತಿರುಚಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯನಿರತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರಿಗಾಗಿ ಇರಬೇಕು. ಪ್ರತಿಯೊಬ್ಬ ನಾಗರಿಕರಿಗೂ ತಮ್ಮದೇ ಆದ ನೆಲೆ ಮತ್ತು ಧ್ವನಿ ಇರಬೇಕು ಎಂದು ಅವರು ಹೇಳಿದರು. ನಾಗರಿಕರ ನೆಲೆ ಎಂಬುದು ಅವರ ಧ್ವನಿಯೇ ಆಗಿದೆ. ನಾಗರಿಕರ ಧ್ವನಿ ನಿರಾಕರಿಸಿದ ಕ್ಷಣ ಪ್ರಜಾಪ್ರಭುತ್ವವೂ ಕಳೆದುಹೋಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ- ಸಂಸ್ಕೃತಿ ಎಂಬುದು ಅತ್ಯಂತ ಮಹತ್ವದ್ದಾಗಿದ್ದು ಅಂತಹ ಪ್ರತಿ- ಸಂಸ್ಕೃತಿಯನ್ನು ನಿಗ್ರಹಿದಾಗ ಅದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ,” ಎಂದರು.

ಜಾತ್ಯತೀತತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು “ಸಂವಿಧಾನ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಧರ್ಮದಿಂದ ತನ್ನನ್ನು ಸಂಪೂರ್ಣ ದೂರಾಗಿಸಿಕೊಳ್ಳುವ ಬದಲು ಅಥವಾ ಒಂದು ಧರ್ಮಕ್ಕಿಂತ ಇನ್ನೊಂದು ಧರ್ಮ ಮೇಲು ಎನ್ನುವ ಬದಲು ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಭಾರತದಲ್ಲಿ ದೇಶ ಎಂಬುದು ಜನರಿಗೆ ಸೇರಿದೆಯೇ ವಿನಾ ದೈವೀ ಮೂಲಕ್ಕೆ ಅಲ್ಲ. ಹಾಗೆಂದು ಅದು ದೈವೀ ಶಕ್ತಿಗಳ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಮತಾಂತರ ವಿರೋಧಿ ಕಾನೂನುಗಳು ಹೆಚ್ಚುತ್ತಿರುವ ಕುರಿತಂತೆ ಮಾತನಾಡುತ್ತಾ, “ಬಲವಂತವಾಗಿ ಅಥವಾ ಆಮಿಷವೊಡ್ಡದ ಸಂದರ್ಭದಲ್ಲಿ ನಾಗರಿಕರಿಗೆ ತಮ್ಮ ಆಯ್ಕೆಯ ಧರ್ಮಕ್ಕೆ ಮತಾಂತರಗೊಳ್ಳುವ ಅವಕಾಶವಿದೆ” ಎಂದು ಹೇಳಿದರು.

ಜೀವನ ಮತ್ತು ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸಾಂವಿಧಾನಿಕ ಸಂಸ್ಥೆಗಳು ಕಳೆದುಕೊಳ್ಳುತ್ತಿರುವ ವಿಶ್ವಾಸಾರ್ಹತೆ ಇತ್ಯಾದಿ ವಿಚಾರಗಳ ಕುರಿತಂತೆಯೂ ಅವರು ತಮ್ಮದೇ ಆದ ಒಳನೋಟಗಳನ್ನು ಈ ಸಂದರ್ಭದಲ್ಲಿ ನೀಡಿದರು.

Kannada Bar & Bench
kannada.barandbench.com