ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಶಾಸಕಾಂಗದ ಅಧಿಕಾರವನ್ನು ಸೀಮಿತಗೊಳಿಸುವ ಮೂಲ ರಚನೆ ತತ್ವವು ಕೀನ್ಯಾಗೆ ಅನ್ವಯಿಸುತ್ತದೆ ಎಂದು ಕೀನ್ಯಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಿಲ್ಡಿಂಗ್ ಬ್ರಿಜ್ಜಸ್ ಇನಿಶಿಯೇಟಿವ್ ಎನ್ನುವ ಮುನ್ನೋಟದ ಅಡಿ ಅಧ್ಯಕ್ಷ ಉಹುರು ಕೆನ್ಯಾಟ ಅವರು ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ.
ಮಸೂದೆಯು ಅಧಿಕಾರ ವಿಭಜನೆ ತತ್ವ (ಡಾಕ್ಟ್ರೀನ್ ಆಫ್ ಸೆಪರೇಷನ್ ಆಫ್ ಪವರ್ಸ್) ಹಾಗೂ ತಡೆ ಮತ್ತು ನಿಯಂತ್ರಣಗಳನ್ನು (ಸಂವಿಧಾನದ ಯಾವುದೇ ಅಂಗಗಳು ಸಂಪೂರ್ಣ ಹಿಡಿತ ಸಾಧಿಸುವುದನ್ನು ನಿಯಂತ್ರಿಸುವುದನ್ನು ತಪ್ಪಿಸಲು - ಚೆಕ್ಸ್ ಅಂಡ್ ಬ್ಯಾಲೆನ್ಸಸ್) ಉಲ್ಲಂಘಿಸುವ ಮೂಲಕ ಅಧ್ಯಕ್ಷೀಯ ಮಾದರಿ ಸರ್ಕಾರವನ್ನು ಬದಲಿಸುವ ಬೆದರಿಕೆಯೊಡ್ಡಿದೆ ಎಂದು ಅರ್ಜಿದಾರರು ವಾದಿಸಿದ್ದರು. ಇಷ್ಟು ಮಾತ್ರವಲ್ಲದೇ ಉದ್ದೇಶಿತ ಮಸೂದೆಯು ಸಂಸತ್ ಕಾರ್ಯವಿಧಾನ, ನ್ಯಾಯಿಕ ಸೇವಾ ಆಯೋಗ, ದೇಶದ ವಿಧಾನ ಮಂಡಲಗಳು ಹಾಗೂ ಸ್ವತಂತ್ರ ಚುನಾವಣಾ ಮತ್ತು ಗಡಿ ಆಯೋಗದ ಕಾರ್ಯ ವಿಧಾನವನ್ನು ಬದಲಿಸಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ಸಂಸತ್‌ನ ಅಧಿಕಾರ ಮತ್ತು ಮಿತಿಗಳನ್ನು ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದಂತೆ ತಮ್ಮ ವಾದಕ್ಕೆ ಸಮರ್ಥನೆಯಾಗಿ ಅರ್ಜಿದಾರರು ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಸರ್ಕಾರ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿದ್ದರು.
ಸಂವಿಧಾನ ಬದಲಾವಣೆ ಮಾಡುವ ಯಾವುದೇ ಅಧಿಕಾರ ಸಂವಿಧಾನದತ್ತವಾಗಿ ಅಧ್ಯಕ್ಷರಿಗೆ ಇಲ್ಲ. ಸಂಸದೀಯ ಪ್ರಕ್ರಿಯೆಯ ಮೂಲಕ ಸಂವಿಧಾನದ 256ನೇ ವಿಧಿ ಅಡಿ ಅಥವಾ ಸಂವಿಧಾನದ 257ನೇ ವಿಧಿ ಅಡಿ ಜನಪ್ರಿಯ ಪ್ರಕ್ರಿಯೆ ಮೂಲಕ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೊಳಿಸಬಹುದು ಎಂದು ಕೀನ್ಯಾ ನ್ಯಾಯಾಲಯ ಹೇಳಿದೆ.
ಸಂವಿಧಾನದ ತಿದ್ದುಪಡಿಯ ಕುರಿತು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿ ಸಾಂವಿಧಾನಿಕ ಬದಲಾವಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಮತ್ತು ಉತ್ತೇಜಿಸುವ ಮೂಲಕ ಅಧ್ಯಕ್ಷ ಉಹುರು ಕೆನ್ಯಾಟ ಅವರು ಸಂವಿಧಾನದ 6ನೇ ಅಧ್ಯಾಯ ಮತ್ತು ವಿಶೇಷವಾಗಿ 73(1)(ಎ)(ಐ) ವಿಧಿಯನ್ನು ಉಲ್ಲಂಘಿಸಿದ್ದಾರೆ ಎಂದು ಕೀನ್ಯಾ ನ್ಯಾಯಾಲಯ ಹೇಳಿದೆ.