ಮೂಲ ರಚನಾ ಸಿದ್ಧಾಂತ ನ್ಯಾಯಾಧೀಶರ ಪಾಲಿನ ಧ್ರುವತಾರೆ: ಉಪರಾಷ್ಟ್ರಪತಿ ಆಕ್ಷೇಪಕ್ಕೆ ಸಿಜೆಐ ಪರೋಕ್ಷ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್‌ ಮತ್ತು ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿರುವ ಸಂದರ್ಭದಲ್ಲಿ ನ್ಯಾಯಾಂಗ ಸದ್ಯದ ಮಟ್ಟಿಗೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಬೆಂಬಲಿಸುತ್ತದೆ ಎಂಬುದರ ಧ್ಯೋತಕ ಎಂಬಂತೆ ಸಿಜೆಐ ಅವರ ಮಾತುಗಳಿವೆ.
CJI DY Chndrachud ,Vice President Jagdeep Dhankhar
CJI DY Chndrachud ,Vice President Jagdeep Dhankhar
Published on

ಸಂವಿಧಾನವನ್ನು ವ್ಯಾಖ್ಯಾನಿಸುವವರಿಗೆ ಸಂವಿಧಾನದ ಮೂಲ ರಚನೆಯು ಧ್ರುವ ನಕ್ಷತ್ರದಂತೆ ಮಾರ್ಗದರ್ಶನ ಮಾಡುತ್ತದೆ. ಜೊತೆಗೆ ಹಾದಿ ಕಗ್ಗಂಟಾದಾಗ ನ್ಯಾಯಾಧೀಶರ ನೆರವಿಗೆ ಧಾವಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

ಬಾಂಬೆ ವಕೀಲರ ಸಂಘ ​​ಆಯೋಜಿಸಿದ್ದ ನಾನಿ ಪಾಲ್ಖಿವಾಲಾ ಸ್ಮಾರಕ 18ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆ ಮೂಲಕ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮೂಲ ರಚನಾ ಸಿದ್ಧಾಂತದ ಬಗ್ಗೆ ನೀಡಿದ್ದ ಹೇಳಿಕೆಗೆ ಪರೋಕ್ಷವಾದ ಆದರೆ ಪರಿಣಾಮಕಾರಿಯಾದ ಪ್ರತಿಕ್ರಿಯೆ ನೀಡಿದಂತಿದೆ.

Also Read
ನ್ಯಾಯಾಂಗ ಘನತೆಯಿಂದ ವರ್ತಿಸಬೇಕು: ಉಪರಾಷ್ಟ್ರಪತಿ ಜಗದೀಪ್ ಧನಕರ್

ಸಂವಿಧಾನ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ನಿರ್ಬಂಧಿಸಿ  ಸುಪ್ರೀಂ ಕೋರ್ಟ್‌ 1973ರಲ್ಲಿ ನೀಡಿದ್ದ ಕೇಶವಾನಂದ ಭಾರತಿ ತೀರ್ಪು ಪ್ರಮಾದದಿಂದ ಕೂಡಿದ್ದು ತಪ್ಪು ಪರಂಪರೆಯನ್ನು ಹುಟ್ಟುಹಾಕಿದೆ ಎಂದು ರಾಜಸ್ಥಾನದ ಜೈಪುರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ  83ನೇ ಅಖಿಲ ಭಾರತ ಸ್ಪೀಕರ್‌ಗಳ ಸಮಾವೇಶದಲ್ಲಿ ಧನಕರ್‌ ಹೇಳಿದ್ದರು.

ಸಿಜೆಐ ಮಾತಿನ ಪ್ರಮುಖಾಂಶಗಳು

  • ಬದಲಾದ ಕಾಲಕ್ಕೆ ತಕ್ಕಂತೆ ಸಂವಿಧಾನದ ತಿರುಳನ್ನು ಅರ್ಥೈಸುವಲ್ಲಿ ನ್ಯಾಯಾಧೀಶರ ಕುಶಲತೆ ಅಡಗಿದೆ.

  • ನಮ್ಮ ಸಂವಿಧಾನದ ಮೂಲ ರಚನೆಯು ಉತ್ತರ ದಿಕ್ಕಿನ ಧ್ರುವತಾರೆ ಇದ್ದಂತೆ. ಎದುರಿನ ಹಾದಿ ಕಗ್ಗಂಟಾಗಿದ್ದಾಗ ಅದು ಸಂವಿಧಾನ ವ್ಯಾಖ್ಯಾನಕಾರರು ಮತ್ತು ಅದನ್ನು ಜಾರಿಗೆ ತರುವವರಿಗೆ ಮಾರ್ಗದರ್ಶನ ಮಾಡುತ್ತದೆ. ಸಂವಿಧಾನ ಪಾರಮ್ಯತೆ, ಕಾನೂನು ಆಡಳಿತ, ಅಧಿಕಾರ ವಿಂಗಡಣೆ, ನ್ಯಾಯಾಂಗ ವಿಮರ್ಶೆ, ಜಾತ್ಯತೀತತೆ, ಒಕ್ಕೂಟ ತತ್ವ, ಸ್ವಾತಂತ್ರ್ಯ, ವ್ಯಕ್ತಿ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಮೂಲ ರಚನಾ ಸಿದ್ಧಾಂತ ಅಥವಾ ಸಂವಿಧಾನಾದ ತತ್ವ ಆಧರಿಸಿದೆ.

  • ಸಂವಿಧಾನ ನೀಡಿದ ಹಕ್ಕುಗಳ ರಕ್ಷಣೆಗಾಗಿ ನಾನಿ ಪಾಲ್ಖಿವಾಲಾ ಅವರು ತಮ್ಮ ಜೀವನ ಮುಡಿಪಾಗಿಟ್ಟರು. ಅವರು ಇಲ್ಲದೇ ಹೋಗಿದ್ದರೆ ಭಾರತಕ್ಕೆ ಮೂಲ ರಚನಾ ಸಿದ್ಧಾಂತ ದೊರೆಯುತ್ತಿರಲಿಲ್ಲ.

ಸುಪ್ರೀಂ ಕೋರ್ಟ್‌ ಮತ್ತು ಸರ್ಕಾರದ ನಡುವೆ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಘರ್ಷ ಏರ್ಪಟ್ಟಿರುವ ಸಂದರ್ಭದಲ್ಲಿ ನ್ಯಾಯಾಂಗ ಸದ್ಯದ ಮಟ್ಟಿಗೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಬೆಂಬಲಿಸುತ್ತದೆ ಎಂಬುದರ ಧ್ಯೋತಕವೆಂಬಂತೆ ಸಿಜೆಐ ಅವರ ಮಾತುಗಳಿವೆ.

ಏನಿದು ಮೂಲ ರಚನಾ ಸಿದ್ಧಾಂತ? ಸಂಸತ್ತಿಗೆ ಸಂವಿಧಾನದ ಯಾವುದೇ ಭಾಗವನ್ನು ಬದಲಾಯಿಸುವ ಅಧಿಕಾರವಿದ್ದರೂ ಸಂವಿಧಾನದ ಮೂಲ ರಚನೆಗೆ ಅದು ಕೈ ಹಾಕುವಂತಿಲ್ಲ ಎನ್ನುತ್ತದೆ ಮೂಲ ರಚನಾ ಸಿದ್ಧಾಂತ. 
Kannada Bar & Bench
kannada.barandbench.com