ಬಿಬಿಸಿ ಸಾಕ್ಷ್ಯಚಿತ್ರ ʼಇಂಡಿಯಾ: ದ ಮೋದಿ ಕ್ವೆಶ್ಚನ್ʼ ನಿಷೇಧ ಪ್ರಶ್ನಿಸಿರುವ ಪಿಐಎಲ್ ಆಲಿಸಲು ಸುಪ್ರೀಂ ಸಮ್ಮತಿ

ಪ್ರಕರಣವನ್ನು ಫೆಬ್ರವರಿ 6ರಂದು ವಿಚಾರಣೆಗೆ ಪಟ್ಟಿಮಾಡುವುದಾಗಿ ತಿಳಿಸಿದ ನ್ಯಾಯಾಲಯ.
ML Sharma, BBC and Supreme Court
ML Sharma, BBC and Supreme Court

ಎರಡು ದಶಕಗಳ ಹಿಂದೆ ನಡೆದಿದ್ದ ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಆಲಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡಬೇಕೆಂದು ವಕೀಲ ಎಂ ಎಲ್‌ ಶರ್ಮಾ ಕೋರಿದಾಗ ಫೆಬ್ರವರಿ 6 ಸೋಮವಾರ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಪತ್ರಕರ್ತ ಎನ್ ರಾಮ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ ಇದ್ದ ತಮ್ಮ ಟ್ವೀಟ್‌ಗಳನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಗಳು ಸಹ ಅಂದೇ (ಸೋಮವಾರ) ವಿಚಾರಣೆಗೆ ಬರಲಿವೆ.

Also Read
ʼಎ ಬಿಗ್‌ ಲಿಟಲ್‌ ಮರ್ಡರ್‌ʼ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್‌, ಸಿಎನ್‌ಎಗೆ ದೆಹಲಿ ಹೈಕೋರ್ಟ್‌ ತಡೆ

ಸುಮಾರು ಎರಡು ದಶಕಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರವನ್ನು ಬಿಬಿಸಿ ಸಾಕ್ಷ್ಯಚಿತ್ರ ʼಇಂಡಿಯಾ: ದ ಮೋದಿ ಕ್ವೆಶ್ಚನ್‌ʼ ವಿಶ್ಲೇಷಿಸಿತ್ತು.

ದೇಶದ ವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್‌ನಲ್ಲಿ ಅದನ್ನು ನಿಷೇಧಿಸಿದೆ.

ಶರ್ಮಾ ಅರ್ಜಿಯ ಪ್ರಮುಖಾಂಶಗಳು

  • ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದು ಮನಸೋ ಇಚ್ಛೆಯಿಂದ ಕೂಡಿದ್ದು ಅಸಾಂವಿಧಾನಿಕವಾಗಿದೆ.

  • ಗುಜರಾತ್ ಗಲಭೆಗೆ ಕಾರಣರಾದವರ ಹಾಗೂ ಅದನ್ನು ನಿಯಂತ್ರಿಸಲು ವಿಫಲರಾದವರ ವಿರುದ್ಧವೂ ತನಿಖೆ ನಡೆಸಬೇಕು.

  • ಭಾರತದ ಪ್ರಜೆಗಳನ್ನು ಬರ್ಬರವಾಗಿ ಕೊಂದು ಹಾಕಿ ಸಾಂವಿಧಾನಿಕ ನಿಯಮಾವಳಿ ಪಾಲಿಸದೆ ನಡೆದುಕೊಂಡದ್ದು ಸಾಂವಿಧಾನಿಕ ವ್ಯವಸ್ಥೆಗೆ ಗಂಭೀರ ಹಾನಿ ಉಂಟುಮಾಡಿದೆ.

  • ನೈಜಸಂಗತಿಗಳನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ಐಟಿ ನಿಯಮಾವಳಿ 2021ರ ನಿಯಮ 16ರ ಅನ್ವಯ ನಿಷೇಧಿಸಿದ್ದರಿಂದ ಈ ಅರ್ಜಿ ಸಲ್ಲಿಸಬೇಕಾಯಿತು.

  • ನಿಷೇಧ ವಿಧಿಸಿರುವುದು ಸಂವಿಧಾನದ 19 (1) (ಎ) ವಿಧಿಯಡಿಯಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ.

  • ಸಂತ್ರಸ್ತರು, ಪೊಲೀಸ್ ಅಧಿಕಾರಿಗಳು ಮತ್ತಿತರ ನಾಗರಿಕರ ಹೇಳಿಕೆಗಳನ್ನು ಆಧರಿಸಿರುವ ಸಾಕ್ಷ್ಯಚಿತ್ರ ಸ್ವತಂತ್ರ ಕೃತಿಯಾಗಿದೆ.

  • ಆದರೆ ಸತ್ಯ ಹೊರಬೀಳುತ್ತದೆ ಎಂಬ ಭಯದಲ್ಲಿ ಐಟಿ ನಿಯಮಾವಳಿ 2021ರ ನಿಯಮ 16ರ ಅಡಿ ಸಾಕ್ಷ್ಯಚಿತ್ರವನ್ನು ನಿಷೇಧಿಸಲಾಗಿದೆ. ಸಾಕ್ಷ್ಯಚಿತ್ರ ಕೂಡ ಒಂದು ಸಾಕ್ಷಿಯಾಗಿದ್ದು ನ್ಯಾಯ ನಿರಾಕರಿಸಲಾದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದನ್ನು ಬಳಸಬಹುದು.

  • ಹಾಗಾಗಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿ ಜನವರಿ 21ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಬೇಕು.

  • ಗುಜರಾತ್ ಗಲಭೆಗೆ ಕಾರಣರಾದವರ ವಿರುದ್ಧ ತನಿಖೆ ನಡೆಸಬೇಕು.

Related Stories

No stories found.
Kannada Bar & Bench
kannada.barandbench.com